ADVERTISEMENT

ವಿಶ್ವದ ಮನಕಲಕಿ, ಟ್ರಂಪ್ ಮನಸು ಬದಲಿಸುವಂತೆ ಮಾಡಿದ ಚಿತ್ರಕ್ಕೆ ಜಾಗತಿಕ ಪುರಸ್ಕಾರ

ಏಜೆನ್ಸೀಸ್
Published 12 ಏಪ್ರಿಲ್ 2019, 4:27 IST
Last Updated 12 ಏಪ್ರಿಲ್ 2019, 4:27 IST
   

ಅಮ್‌ಸ್ಟರ್‌ಡಮ್ (ನೆದರ್‌ಲೆಂಡ್ಸ್): ಅಮೆರಿಕದ ಗಡಿಯಲ್ಲಿ ತನ್ನ ತಾಯಿಯ ಜೊತೆನಿಂತು ಅಸಹಾಯಕಳಾಗಿ ಅಳುತ್ತಿದ್ದ ಹುಡುಗಿಯ ಚಿತ್ರಕ್ಕೆ ಈ ವರ್ಷದ ಪ್ರತಿಷ್ಠಿತ ವಿಶ್ವ ಪ್ರೆಸ್‌ ಫೋಟೊ ಪುರಸ್ಕಾರ ಸಂದಿದೆ. ತಾಯಿ–ಮಗಳನ್ನು ಅಮೆರಿಕದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದುಕೊಳ್ಳುವ ಸನ್ನಿವೇಶವನ್ನು ಚಿತ್ರವು ಕಟ್ಟಿಕೊಟ್ಟಿತ್ತು.

‘ಜೆಟ್ಟಿ ಇಮೇಜಸ್‌’ನ ಹಿರಿಯ ಛಾಯಾಗ್ರಾಹಕ ಜಾನ್‌ ಮೂರ್ತೆಗೆದಿರುವ ಈ ಚಿತ್ರವು ಅಮೆರಿಕ–ಮೆಕ್ಸಿಕೊ ಗಡಿಯಲ್ಲಿರುವ ಮಾನಸಿಕ ಹಿಂಸಾಚಾರವನ್ನು ಬಿಂಬಿಸುತ್ತದೆ. ತಾಯಿ ಸಂದ್ರಾ ಸಂಚೆಜ್ ಜೊತೆಗೂಡಿ ಮೆಕ್ಸಿಕೊ ಗಡಿ ದಾಟಿ ಅಮೆರಿಕಕ್ಕೆ ಬಂದಿದ್ದ ಪುಟ್ಟ ಯನೆಲಾ, ತನ್ನ ತಾಯಿಯನ್ನು ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿದಾಗ ಒಂದೇ ಸಮನೆ ಅಳಲು ಆರಂಭಿಸಿದಳು.

ಅಳುವ ಮಗುವಿನ ಚಿತ್ರವು ವಿಶ್ವದ ಬಹುತೇಕ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಅಮೆರಿಕದ ಗಡಿ ಭದ್ರತಾ ಪಡೆವಶಕ್ಕೆ ಪಡೆದ ವಲಸಿಗ ತಂದೆ–ತಾಯಿಯಿಂದ ಮಕ್ಕಳನ್ನು ಬೇರ್ಪಡಿಸುವ ಅಮೆರಿಕದ ನೀತಿಗೆವಿಶ್ವದೆಲ್ಲಿಡೆ ಖಂಡನೆ ವ್ಯಕ್ತವಾಗಿತ್ತು.

‘ಯನೆಲಾಳನ್ನು ಅವಳ ತಾಯಿಯಿಂದ ಪ್ರತ್ಯೇಕಿಸಿರಲಿಲ್ಲ’ ಎಂದು ಅಮೆರಿಕದ ಗಡಿ ಭದ್ರತಾ ಪಡೆಯ ಅಧಿಕಾರಿಗಳು ನಂತರದ ದಿನಗಳಲ್ಲಿ ಸ್ಪಷ್ಟನೆ ನೀಡಿದ್ದರು. ಆದರೂ ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ಕಳೆದ ವರ್ಷ ಜೂನ್ ತಿಂಗಳಲ್ಲಿ ವಲಸೆ ನೀತಿಯನ್ನು ಅನಿವಾರ್ಯವಾಗಿಪರಿಷ್ಕರಿಸಿದರು. ಮುಗ್ಧಮಗುವಿನ ಮೂಲಕ ದೇಶದೇಶಗಳ ರಾಜಕಾರಣ ಮತ್ತು ಭಾವಾನಾತ್ಮಕ ಹಿಂಸಾಚಾರವನ್ನು ಜಗತ್ತಿನೆದುರು ತೆಗೆದಿಟ್ಟ ಚಿತ್ರ ಇದು ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ.

ಭಯವೊಂದೇ ಕಾಣುತ್ತಿತ್ತು

ಕಳೆದ ವರ್ಷ ಜೂನ್ 12ರಂದು ರಿಯೊ ಗ್ರಾಂಡ್ ಕಣಿವೆಯಲ್ಲಿ, ಬೆಳದಿಂಗಳು ಇಲ್ಲದ ರಾತ್ರಿಯಲ್ಲಿಮೂರ್ ಅಮೆರಿಕದ ಗಡಿ ತಪಾಸಣಾ ಸಿಬ್ಬಂದಿಯ ಚಿತ್ರ ತೆಗೆಯುತ್ತಿದ್ದರು. ಈ ಸಂದರ್ಭ ಗಡಿ ದಾಟಲು ಬಂದಿದ್ದ ಜನರ ಗುಂಪೊಂದು ಅವರಿಗೆ ಕಾಣಿಸಿತು.

‘ಅವರ ಕಣ್ಣಿನಲ್ಲಿ, ಮೊಗದಲ್ಲಿ ಭಯವೊಂದೇ ನನಗೆ ಕಾಣಿಸುತ್ತಿತ್ತು’ ಎಂದು ಮೂರ್‌ ಪ್ರಶಸ್ತಿ ಘೋಷಣೆಯಾದ ನಂತರ ಅಮೆರಿಕದ ನ್ಯಾಷನಲ್ ಪಬ್ಲಿಕ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ನೆನಪಿಸಿಕೊಂಡರು.‘ಅಧಿಕಾರಿಗಳು ಸಂದ್ರಾ ಸಂಚೆಜ್ ಹೆಸರು ಕರೆದು, ತಪಾಸಣೆ ಆರಂಭಿಸುತ್ತಿದ್ದಂತೆಯೇಆಕೆಯ ಪುಟ್ಟ ಮಗಳು ಅಳಲು ಆರಂಭಿಸಿದಳು. ತಕ್ಷಣ ಮೊಣಕಾಲೂರಿದ ನಾನು ಪಟಪಟನೆ ಒಂದಿಷ್ಟು ಫೋಟೊಗಳನ್ನು ತೆಗೆದೆ’ ಎಂದು ಮೂರ್ ಹೇಳಿದ್ದಾರೆ.

51 ವರ್ಷದ ಮೂರ್ ಹಲವು ವರ್ಷಗಳಿಂದ ಅಮೆರಿಕ–ಮೆಕ್ಸಿಕೊ ಗಡಿಯ ವಿದ್ಯಮಾನಗಳನ್ನು ಛಾಯಾಚಿತ್ರಗಳ ಮೂಲಕ ಜಗತ್ತಿಗೆ ತೋರಿಸುತ್ತಿದ್ದಾರೆ. ಅಮ್‌ಸ್ಟರ್‌ಡಮ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಮೂರ್, ‘ನನಗೆ ವಿಶಿಷ್ಟ ಕಥೆಯೊಂದನ್ನು ಹೇಳುವ ಹಂಬಲವಿತ್ತು’ ಎಂದು ಹೇಳಿಕೊಂಡಿದ್ದಾರೆ.

‘ಆ ಸಂದರ್ಭವು,ಕೇವಲ ಅಂಕಿಸಂಖ್ಯೆಗಳಲ್ಲಿ ಕಳೆದು ಹೋಗುತ್ತಿದ್ದ ಮಾನವೀಯತೆಯನ್ನು ಚಿತ್ರದಲ್ಲಿ ತೋರಿಸುವ ಅಪರೂಪದ ಅವಕಾಶವಾಗಿತ್ತು’ ಎಂದು ಹೇಳಿದರು.ಪುರಸ್ಕಾರಕ್ಕಾಗಿ ವಿಶ್ವದ ವಿವಿಧೆಡೆಯಿಂದ 4738 ಛಾಯಾಗ್ರಾಹಕರು78,801 ಚಿತ್ರಗಳನ್ನು ಕಳಿಸಿದ್ದರು.

ಸೂಡಾನ್ ದೇಶದ ಬರಗಾಲ ಬಿಂಬಿಸುವ ಕೆವಿನ್ ಕಾರ್ಟರ್‌ ತೆಗೆದಿದ್ದ ಚಿತ್ರ

ಮರುಕಳಿಸಿತು ಕೆವಿನ್ ಕಾರ್ಟರ್ ನೆನಪು

ದಕ್ಷಿಣ ಆಫ್ರಿಕಾದವನಾಗಿದ್ದ ಕೆವಿನ್ ಕಾರ್ಟರ್ ಬರಗಾಲ ಮತ್ತು ಬಂಡುಕೋರರ ಹಿಂಸಾಚಾರದಿಂದ ನಲುಗಿಹೋಗಿದ್ದ ಸೂಡಾನ್‌ಗೆ ಹೋದಾಗ ಅಲ್ಲೊಂದು ಹೃದಯವಿದ್ರಾವಕ ದೃಶ್ಯವನ್ನು ಕಾಣುತ್ತಾನೆ.ಹಸಿವಿನಿಂದಾಗಿ ಮೂಳೆಚಕ್ಕಳವಾಗಿ ಹೋಗಿದ್ದ ಮಗುವೊಂದು ಸಂತ್ರಸ್ತರ ಶಿಬಿರದಲ್ಲಿರುವ ಗಂಜಿ ಕೇಂದ್ರದ ಕಡೆ ತೆವಳುತ್ತಾ ಹೋಗುತ್ತಿರುವುದು ಮತ್ತು ಅದರ ಹಿಂದೆಯೇ ಒಂದು ರಣಹದ್ದು ಆ ಮಗುವಿನ ಮೇಲೆ ಎರಗಿಬೀಳಲು ಕಾಯುತ್ತಿರುವ ದೃಶ್ಯ ಅದು.

ಸದ್ದು ಮಾಡಿದರೆ ಹದ್ದು ಹಾರಿಹೋಗುತ್ತೇನೋ ಎಂಬ ಭಯದಿಂದ ಕಾರ್ಟರ್ ಕೂಡಾ ತೆವಳುತ್ತಾ ಸಾಧ್ಯ ಇರುವಷ್ಟು ಹತ್ತಿರ ಹೋಗಿ ಫೋಟೊ ತೆಗೆಯುತ್ತಾನೆ. ಅದಕ್ಕಿಂತ ಮೊದಲು ಹದ್ದು ರೆಕ್ಕೆ ಬಿಚ್ಚಬಹುದೇನೋ ಎಂಬ ನಿರೀಕ್ಷೆಯಿಂದ ಆತ 20 ನಿಮಿಷ ಕಾದಿದ್ದನಂತೆ.

ಆ ಫೋಟೊ ಮೊದಲು `ದಿ ನೂಯಾರ್ಕ್ ಟೈಮ್ಸ’ಮತ್ತು ‘ದಿ ಮೇಲ್ ಆ್ಯಂಡ್ ಗಾರ್ಡಿಯನ್’ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ಅದರ ನಂತರಹಲವಾರು ಪತ್ರಿಕೆಗಳು ಅದನ್ನು ಮರುಮುದ್ರಿಸಿದ್ದವು. ಜಗತ್ತಿನಾದ್ಯಂತ ಓದುಗರು ಅದಕ್ಕೆ ಪ್ರತಿಕ್ರಿಯಿಸಿದ್ದರು.ಬರಗಾಲ ಮತ್ತು ಬಂಡುಕೋರರ ವಿರುದ್ಧ ಹೋರಾಟ ನಡೆಸುತ್ತಿದ್ದ ಸೂಡಾನ್ ಸರ್ಕಾರಕ್ಕೆ ವಿಶ್ವದ ಎಲ್ಲ ಕಡೆಗಳಿಂದಲೂ ನೆರವು ಹರಿದುಬಂದಿತ್ತು.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.