ಇಸ್ಲಾಮಾಬಾದ್: ಜಾಗತಿಕ ಸಾಲದಾತ ಸಂಸ್ಥೆ ಆರ್ಥಿಕ ನೆರವಿನ ಪ್ಯಾಕೇಜ್ ಕುರಿತ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸುವ ಮೊದಲೇ ಎಲ್ಲಾ ರಚನಾತ್ಮಕ ಮಾನದಂಡಗಳು ಮತ್ತು ಪರಿಮಾಣಾತ್ಮಕ, ಸೂಚಕ ಗುರಿಗಳನ್ನು ಸಾಧಿಸಲಾಗಿದೆ ಎಂದು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನ ನೀಡಿರುವ ಹೇಳಿಕೆಗೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಐಎಂಎಫ್‌ನ ತಂಡವೊಂದು ಇಸ್ಲಾಮಾಬಾದ್‌ಗೆ ತಲುಪಿದ್ದು, ಕಳೆದ ವರ್ಷ ಒಪ್ಪಿಗೆ ನೀಡಲಾಗಿದ್ದ ಸುಮಾರು ₹25 ಸಾವಿರ ಕೋಟಿ ಆರ್ಥಿಕ ನೆರವಿನ ಪ್ಯಾಕೇಜ್‌ನ ಕೊನೆಯ ಕಂತಿನ ₹8 ಸಾವಿರ ಕೋಟಿ ಬಿಡುಗಡೆ ಮಾಡುವ ಮೊದಲು ಮಾತುಕತೆ ನಡೆಸಿದೆ.
ಮಾಧ್ಯಮ ವರದಿಗಳ ಪ್ರಕಾರ, ಐಎಂಎಫ್ ಯೋಜನೆಯ ಮುಖ್ಯಸ್ಥ ನಥಾನ್ ಪಾರ್ಟರ್ ಮತ್ತು ಅವರ ಸಹೋದ್ಯೋಗಿಗಳು ತಾವು ಆರಂಭಿಸಿದ 25 ಸಾವಿರ ಕೋಟಿ (3 ಶತಕೋಟಿ ಡಾಲರ್) ಆರ್ಥಿಕ ನೆರವಿನ ಪರಿಶೀಲನಾ ಪ್ರಕ್ರಿಯೆಯು ಪೂರ್ಣಗೊಳ್ಳುವ ಮೊದಲು ಹಣಕಾಸು ಸಚಿವಾಲಯವು ಈ ಘೋಷಣೆ ಮಾಡಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದೆ. ತಂಡವು ಈಗಷ್ಟೇ ಪರಿಶೀಲನೆ ಆರಂಭಿಸಿದೆ. ರಾಷ್ಟ್ರೀಯ ಆರ್ಥಿಕತೆಯ ವಿವಿಧ ವಲಯಗಳ ಅಧಿಕೃತ ಅಂಕಿಅಂಶವನ್ನು ವಿಶ್ಲೇಷಿಸಿದ ನಂತರವಷ್ಟೇ ತಂಡವು ತನ್ನ ಶಿಫಾರಸು ಮಾಡಲಿದೆ.
ಐಎಂಎಫ್‌ನ ಅಸಮಾಧಾನ ಗಮನಕ್ಕೆ ಬರುತ್ತಿದ್ದಂತೆ ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್ ಅವರು ಭವಿಷ್ಯದಲ್ಲಿ ಇಂತಹ ಪ್ರಸಂಗ ಪುನರಾವರ್ತನೆಯಾಗಬಾರದೆಂಬ ನಿಲುವು ತೆಗೆದುಕೊಂಡಿದ್ದಾರೆ.
ಆರ್ಥಿಕ ನೆರವಿನ ಪ್ಯಾಕೇಜ್ ಹಣ ಬಿಡುಗಡೆಗೆ ಪಾಕಿಸ್ತಾನ ಮತ್ತು ಐಎಂಎಫ್ ಎರಡನೇ ಪರಾಮರ್ಶೆ ಪೂರ್ಣಗೊಳಿಸಲು ತ್ವರಿತಕ್ರಿಯೆ ಪ್ರಾರಂಭಿಸಿದವು. ಆರ್ಥಿಕ ಮತ್ತು ಹಣಕಾಸು ನೀತಿಗಳ ಜ್ಞಾಪನಾಪತ್ರ (ಎಂಇಇಪಿ) ಕುರಿತು ಒಪ್ಪಂದ ಮಾಡಿಕೊಂಡ ನಂತರ ಸುಮಾರು ₹9 ಸಾವಿರ ಕೋಟಿಯ (1.1 ಶತಕೋಟಿ ಡಾಲರ್) ಕೊನೆಯ ಕಂತಿನ ಹಣ ಬಿಡುಗಡೆಗೆ ಇದೇ ವರ್ಷದ ಏಪ್ರಿಲ್ ಎರಡನೇ ವಾರದಲ್ಲಿ ಐಎಂಎಫ್‌ನ ಕಾರ್ಯಕಾರಿ ಮಂಡಳಿಯ ಮುಂದೆ ಪ್ರಸ್ತಾವನೆ ಮಂಡಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.