ಇಸ್ಲಾಮಾಬಾದ್:ತಮ್ಮ ಪ್ರಮಾಣವಚನ ಕಾರ್ಯಕ್ರಮಕ್ಕೆ ಹಾಜರಾಗಿ ವಿವಾದ ಸೃಷ್ಟ್ಟಿಸಿಕೊಂಡಿದ್ದ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಶಾಂತಿದೂತ ಎಂದು ಕರೆದಿದ್ದಾರೆ.
‘ನನ್ನ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಿಧು ಒಬ್ಬ ಶಾಂತಿಯ ರಾಯಭಾರಿ. ಅವರಿಗೆ ಪಾಕಿಸ್ತಾನದ ಜನರು ಸಹ ಸಾಕಷ್ಟು ಪ್ರೀತಿ–ವಿಶ್ವಾಸ ತೋರಿದ್ದಾರೆ’ ಎಂದು ಇಮ್ರಾನ್‌ಖಾನ್ ಅವರು ಟ್ವೀಟ್ ಮಾಡಿದ್ದಾರೆ.
‘ಭಾರತದಲ್ಲಿ ಪಂಜಾಬ್ ಸಚಿವ ಸಿಧು ಅವರ ನಡೆಯನ್ನು ಟೀಕಿಸುವವರು ಉಭಯ ದೇಶಗಳ ನಡುವಿನ ಶಾಂತಿಗೆ ಭಂಗವನ್ನುಂಟು ಮಾಡುತ್ತಿದ್ದಾರೆ. ಶಾಂತಿ ನೆಲೆಸದೇ ಅಭಿವೃದ್ಧಿ ಸಾಧಿಸಲು ಸಾಧ್ಯ ಇಲ್ಲ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.
ಭಾರತ– ಪಾಕಿಸ್ತಾನದ ನಡುವೆ ಶಾಂತಿ ಪ್ರಕ್ರಿಯೆಯ ಮಾತುಕತೆಯನ್ನು ಪುನರಾರಂಭಿಸಬೇಕು ಎಂದೂ ಇಮ್ರಾನ್ ಬಯಸಿದ್ದು ಕಾಶ್ಮೀರ ವಿಷಯ ಸೇರಿದಂತೆ ಭಿನ್ನಾಭಿಪ್ರಾಯಗಳ ನಿವಾರಣೆಗೆ ಚರ್ಚೆ ಅಗತ್ಯ ಎಂದು ಹೇಳಿದ್ದಾರೆ.
ಜೂನ್ 18ರಂದು ನಡೆದ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಿಧು ನಡೆಗೆ ಭಾರತದಲ್ಲಿ ವಿರೋಧ ಪಕ್ಷಗಳಿಂದ ಭಾರಿ ಟೀಕೆ ವ್ಯಕ್ತವಾಗಿತ್ತು.ಪಾಕಿಸ್ತಾನದ ಸೇನಾ ಮುಖಂಡ ಜಾವೇದ್ ಬಜ್ವಾ ಅವರನ್ನು ಆಲಂಗಿಸಿದ ಸಿಧು ನಡೆಗೆ ಕಾಂಗ್ರೆಸ್ ಪಕ್ಷದವರೇ ಆದ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದರು.
ಪಾಕ್ ಹಿತ ಕಾಯುವ ಕಾಂಗ್ರೆಸ್ಸಿಗರು: ಬಿಜೆಪಿ
ಪಾಕಿಸ್ತಾನದ ಹಿತಾಸಕ್ತಿಗಳನ್ನು ರಕ್ಷಿಸುವ ಜನರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
‘ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಅವರನ್ನು ಸಿಧು ತಬ್ಬಿಕೊಂಡಿದ್ದು ನಾಚಿಕೆಗೇಡಿನ ಸಂಗತಿ’ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಟೀಕಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.