ADVERTISEMENT

ಇಮ್ರಾನ್‌ ಬಿಡುಗಡೆಗೆ ಪ್ರತಿಭಟನೆ | ಇಸ್ಲಾಮಾಬಾದ್‌ ಉದ್ವಿಗ್ನ: 30 ಮಂದಿ ಬಂಧನ

ಪಿಟಿಐ
Published 6 ಅಕ್ಟೋಬರ್ 2024, 15:16 IST
Last Updated 6 ಅಕ್ಟೋಬರ್ 2024, 15:16 IST
ಇಮ್ರಾನ್‌ ಖಾನ್
ಇಮ್ರಾನ್‌ ಖಾನ್   

ಇಸ್ಲಾಮಾಬಾದ್‌: ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್‌ ಇ ಇನ್ಸಾಫ್‌ (ಪಿಟಿಐ) ಪಕ್ಷವು ಪಾಕಿಸ್ತಾನ ಸರ್ಕಾರದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ರಾಜಧಾನಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಇಮ್ರಾನ್‌ಖಾನ್‌ ಅವರ ಬಿಡುಗಡೆಗೆ ಒತ್ತಾಯಿಸುವ ಜೊತೆಗೆ ಹಣದುಬ್ಬರಕ್ಕೆ ಕಡಿವಾಣ ಹಾಕಬೇಕು, ನ್ಯಾಯಾಂಗದಲ್ಲಿ ಹಸ್ತಕ್ಷೇಪ ಇರಬಾರದು ಎಂದು ಒತ್ತಾಯಿಸಿ ಪಿಟಿಐ ಪ್ರತಿಭಟನೆಗೆ ಕರೆ ನೀಡಿದೆ. ಪ್ರತಿಭಟನೆ ಭಾನುವಾರ 2ನೇ ದಿನದಲ್ಲಿ ಮುಂದುವರಿದಿತ್ತು.

ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ಸುಮಾರು 30 ಜನರನ್ನು ಬಂಧಿಸಿದ್ದಾರೆ. ಅಲ್ಲದೆ, ಲಾಹೋರ್‌ನಲ್ಲಿ ಇಮ್ರಾನ್ ಖಾನ್‌ ಸೇರಿದಂತೆ ಪಿಟಿಐನ ಸುಮಾರು 200 ಮುಖಂಡರ ವಿರುದ್ಧ ಭಯೋತ್ಪಾದನೆ ಆರೋಪದ ಪ್ರಕರಣದಡಿ ಮೊಕದ್ದಮೆ ದಾಖಲಿಸಿದೆ.

ADVERTISEMENT

ಪ್ರತಿಭಟನೆ ನೇತೃತ್ವ ವಹಿಸಬೇಕಿದ್ದ ಮುಖಂಡ ಅಲಿ ಅಮಿನ್‌ ಗಂದಾಪುರ್ ದಿಢೀರ್ ಬೆಳವಣಿಗೆಯಲ್ಲಿ ತಲೆಮರೆಸಿಕೊಂಡಿದ್ದಾರೆ. ಆದರೂ, ಇಮ್ರಾನ್‌ ಖಾನ್‌ ಕರೆ ನೀಡುವವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಪಕ್ಷ ಸ್ಪಷ್ಟಪಡಿಸಿದೆ. 

ಸರ್ಕಾರವು ಗಂದಾಪುರ್‌ರನ್ನು ಬಂಧಿಸಿದಲ್ಲಿ, ಹಿರಿಯ ಮುಖಂಡ ಅಜಂ ಸ್ವಾತಿ ಪ್ರತಿಭಟನೆ ಮುನ್ನಡೆಸುವರು. ಸ್ವಾತಿ ಅವರನ್ನೂ ಬಂಧಿಸಿದಲ್ಲಿ ಹೊಸ ನಾಯಕ ಮುನ್ನಡೆಸುವರು ಎಂದು ಪಕ್ಷದ ರಾಜಕೀಯ ಸಮಿತಿ ನಿರ್ಧರಿಸಿದೆ ಎಂದು ಡಾನ್ ವರದಿ ಮಾಡಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿರುವ ಇಮ್ರಾನ್‌ ಖಾನ್ ಒಂದು ವರ್ಷದಿಂದ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿದ್ದಾರೆ. ಅವರ ಕರೆಯ ಮೇರೆಗೆ ಇಮ್ರಾನ್‌ಖಾನ್‌ ಬಿಡುಗಡೆ ಹಾಗೂ ನ್ಯಾಯಾಂಗದ ಸ್ವಾಯತ್ತೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ಖೈಬರ್‌ ಫಕ್ತುಂಖ್ವಾ ಪ್ರಾಂತ್ಯದ ಮುಖ್ಯಮಂತ್ರಿಯೂ ಆಗಿರುವ ಗಂದಾಪುರ್ ಅವರ ನಾಪತ್ತೆಗೆ ರಾಜಕೀಯ ಸಮಿತಿಯು ಟೀಕಿಸಿದೆ. ಒಂದು ವೇಳೆ ಅವರನ್ನು ಬಂಧಿಸಿದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದೆ.

ಇಮ್ರಾನ್‌ ಖಾನ್‌ ಅವರಿಗೆ ಸ್ಪಷ್ಟ ನಿರ್ದೇಶನ ಬರುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಪಿಟಿಐ ನಾಯಕ ಅಸದ್‌ ಖೈಸರ್ ಅವರು ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನೆ ಆಂತರಿಕ ವಿಷಯ: ಜೈಶಂಕರ್‌ಗೆ ಆಹ್ವಾನಿಸಿಲ್ಲ

ಪೆಶಾವರ: ‘ಸರ್ಕಾರದ ವಿರುದ್ಧ ಪಕ್ಷ ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಭಾಗವಹಿಸಬೇಕು ಎಂದು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಸೇರಿ ಯಾವುದೇ ವಿದೇಶಿಯರಿಗೂ ಆಹ್ವಾನಿಸಿಲ್ಲ’ ಎಂದು ಪಿಟಿಐ ಪಕ್ಷ ಸ್ಪಷ್ಟಪಡಿಸಿದೆ.

ಪಕ್ಷದ ಮುಖಂಡ ಮೊಹಮ್ಮದ್‌ ಅಲಿ ಸೈಫ್‌ ಅವರ ಹೇಳಿಕೆ ಕುರಿತು ಪಿಟಿಐ ಅಂತರ ಕಾಯ್ದುಕೊಂಡಿದೆ. ‘ಶಾಂತಿಯುತ ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು. ಭಾರತ ಸೇರಿದಂತೆ ವಿದೇಶದ ಯಾವುದೇ ಪ್ರತಿನಿಧಿಗೂ ಆಹ್ವಾನ ನೀಡಿಲ್ಲ. ನಮ್ಮ ಆಂತರಿಕ ವಿಷಯದಲ್ಲಿ ಹೇಳಿಕೆ ನೀಡಲು ಅವಕಾಶವಿಲ್ಲ’ ಎಂದು ಪಕಷದ ಅಧ್ಯಕ್ಷ ಬ್ಯಾರಿಸ್ಟರ್‌ ಗೋಹ್ ಅಲಿ ಖಾನ್‌ ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸಲು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ರಿಗೆ ಆಹ್ವಾನಿಸಲಾಗುವುದು ಎಂದು ಸೈಫ್ ಶನಿವಾರ ಹೇಳಿಕೆ ನೀಡಿದ್ದರು. ಎಸ್‌ಸಿಒ ಶೃಂಗಸಭೆಯಲ್ಲಿ ಭಾಗವಹಿಸಲು ಜೈಶಂಕರ್‌ 15ರಂದು ಪಾಕ್‌ಗೆ ಭೇಟಿ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.