ಇಸ್ಲಾಮಾಬಾದ್: ಜೈಲಿನಲ್ಲಿ ಇರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪತ್ನಿ ಬುಶ್ರಾ ಬೀಬಿ ಅವರನ್ನು 11 ಪ್ರಕರಣಗಳಲ್ಲಿ ಶಂಕಿತೆ ಎಂದು ಹೆಸರಿಸಲಾಗಿದೆ. ಕಳೆದ ವರ್ಷದ ಮೇ 9ರಂದು ಸೇನಾ ಮುಖ್ಯ ಕಚೇರಿಯ ಮೇಲೆ ನಡೆದ ದಾಳಿ ಪ್ರಕರಣ ಕೂಡ ಈ 11 ಪ್ರಕರಣಗಳಲ್ಲಿ ಸೇರಿದೆ ಎಂದು ರಾವಲ್ಪಿಂಡಿ ಪೊಲೀಸರು ಇಸ್ಲಾಮಾಬಾದ್ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದ್ದಾರೆ.
49 ವರ್ಷ ವಯಸ್ಸಿನ ಬುಶ್ರಾ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿವರವನ್ನು ಪೊಲೀಸರು ಹೈಕೋರ್ಟ್‌ಗೆ ಸಲ್ಲಿಸಿದರು. ಬುಶ್ರಾ ಅವರು ಈಗ ಜೈಲಿನಲ್ಲಿದ್ದಾರೆ. ಬುಶ್ರಾ ವಿರುದ್ಧದ ಪ್ರಕರಣಗಳ ವಿವರ ನೀಡುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿತ್ತು.
ಬುಶ್ರಾ ಅವರು ಇಮ್ರಾನ್ ಖಾನ್ ಅವರನ್ನು 2018ರಲ್ಲಿ ವರಿಸಿದ್ದರು. ಇಮ್ರಾನ್ ಅವರಿಗೆ ಬುಶ್ರಾ ಅವರು ಮೂರನೆಯ ಪತ್ನಿ.
ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಬುಶ್ರಾ ಅವರು ಬಹಳ ಪ್ರಭಾವಿ ಎಂದು ಪರಿಗಣಿಸಲಾಗಿತ್ತು. ಆದರೆ ಇಮ್ರಾನ್ ನೇತೃತ್ವದ ಸರ್ಕಾರ ಪತನಗೊಂಡ ನಂತರ ಪತಿ ಹಾಗೂ ಪತ್ನಿಯ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.