ಸೋಲ್: ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ನೆರವಾಗಲು ಉತ್ತರ ಕೊರಿಯಾ ಸೇನಾಪಡೆಗಳನ್ನು ಕಳುಹಿಸಿದೆ ಎಂದು ಬೇಹುಗಾರಿಕಾ ಸಂಸ್ಥೆಯನ್ನು ಉಲ್ಲೇಖಿಸಿ ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದ ವಾಯುಪಡೆ ಮತ್ತು ನೌಕಾಪಡೆಗೆ ನೆರವಾಗಲು ಸುಮಾರು 10,900 ಯೋಧರನ್ನು ಉತ್ತರ ಕೊರಿಯಾ ಕಳುಹಿಸಿದೆ. ಒಂದಷ್ಟು ಯೋಧರು ಈಗಾಗಲೇ ಉಕ್ರೇನ್ ಯುದ್ಧದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉಕ್ರೇನ್ ವಿರುದ್ಧದ ಯುದ್ಧಕ್ಕಾಗಿ ಸ್ವಯಂಚಾಲಿತ ಹೊವಿಟ್ಜರ್‌ಗಳು, ಬಹುರಾಕೆಟ್ ಲಾಂಚರ್‌ಗಳು ಸೇರಿದಂತೆ ಹೆಚ್ಚುವರಿ ಶಸ್ತ್ರಾಸ್ತ್ರಗಳನ್ನು ರಷ್ಯಾಕ್ಕೆ ಉತ್ತರ ಕೊರಿಯಾ ರವಾನಿಸಿದೆ ಎಂದು ಸಂಸತ್ತಿನ ಗುಪ್ತಚರ ಸಮಿತಿಯ ಸದಸ್ಯ ಪಾರ್ಕ್ ಸನ್-ವಾನ್ ಮಾಹಿತಿ ನೀಡಿದ್ದಾರೆ.
ಉತ್ತರ ಕೊರಿಯಾದ ಸೈನಿಕರ ಸಾವು–ನೋವು ಕುರಿತಾದ ನಿಖರವಾದ ಮಾಹಿತಿ ಕಲೆಹಾಕಲು ಬೇಹುಗಾರಿಕಾ ಸಂಸ್ಥೆ ಪ್ರಯತ್ನಿಸುತ್ತಿದೆ ಎಂದು ವಾನ್ ಹೇಳಿದ್ದಾರೆ.
ರಷ್ಯಾದ ಭೂಪ್ರದೇಶದ ಮೇಲೆ ದಾಳಿ ನಡೆಸಲು ಅಮೆರಿಕ ಒದಗಿಸಿದ ಶಸ್ತ್ರಾಸ್ತ್ರಗಳನ್ನು ಬಳಸದಂತೆ ಉಕ್ರೇನ್‌ಗೆ ಹೇರಿದ್ದ ನಿರ್ಬಂಧಗಳನ್ನು ಜೋ ಬೈಡನ್ ನೇತೃತ್ವದ ಆಡಳಿತ ತೆಗೆದುಹಾಕಿದೆ. ಇದು ಉಕ್ರೇನ್-ರಷ್ಯಾ ಸಂಘರ್ಷ ಕುರಿತಾದ ಅಮೆರಿಕದ ನೀತಿಯಲ್ಲಿ ಆಗಿರುವ ಮಹತ್ವದ ಬದಲಾವಣೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕ ಈ ನಿರ್ಧಾರದಿಂದ ರಷ್ಯಾದ ಮೇಲೆ ಉಕ್ರೇನ್ ತನ್ನ ಮೊದಲ ದೀರ್ಘ ಶ್ರೇಣಿಯ ದಾಳಿಯನ್ನು ನಡೆಸಲು ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಶ್ವೇತಭವನವು ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
2025ರ ಜನವರಿ 20ರಂದು ಅಮೆರಿಕ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದಕ್ಕೂ ಎರಡು ತಿಂಗಳ ಮೊದಲೇ ಬೈಡನ್ ಅವರು ಅಮೆರಿಕದ ಶಸ್ತ್ರಾಸ್ತ್ರಗಳನ್ನು ಬಳಸಲು ಅನುಮತಿ ನೀಡಬೇಕೆಂಬ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಮನವಿಗೆ ಸ್ಪಂದಿಸಿದ್ದಾರೆ.
ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ನೆರವಾಗಲು ಉತ್ತರ ಕೊರಿಯಾ ಸೇನಾಪಡೆಗಳನ್ನು ಕಳುಹಿಸಿದೆ. ಇದಕ್ಕೆ ಪ್ರತ್ಯುತ್ತರವಾಗಿ ಅಮೆರಿಕ ತನ್ನ ನಿಲುವು ಬದಲಾಯಿಸಿದೆ ಎಂದು ವಿಶ್ಲೇಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.