ADVERTISEMENT

ಯುದ್ಧಭೂಮಿಯಲ್ಲಿ ಪರಿಹಾರ ಸಿಗದು: ಆಸ್ಟ್ರೀಯಾದಲ್ಲಿ ಮೋದಿ ಪುನರುಚ್ಚಾರ

40 ವರ್ಷದ ಬಳಿಕ ಭಾರತದ ಪ್ರಧಾನಿ ಭೇಟಿ

ಪಿಟಿಐ
Published 10 ಜುಲೈ 2024, 16:02 IST
Last Updated 10 ಜುಲೈ 2024, 16:02 IST
<div class="paragraphs"><p>ಆಸ್ಟ್ರೀಯಾ ಪ‍್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅವರೊಂದಿಗೆ ಬುಧವಾರ ವಿಯೆನ್ನಾದಲ್ಲಿ ಆಸ್ಟ್ರೀಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮೆರ್ ಸೆಲ್ಫಿ ತೆಗೆದುಕೊಂಡರು</p></div>

ಆಸ್ಟ್ರೀಯಾ ಪ‍್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅವರೊಂದಿಗೆ ಬುಧವಾರ ವಿಯೆನ್ನಾದಲ್ಲಿ ಆಸ್ಟ್ರೀಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮೆರ್ ಸೆಲ್ಫಿ ತೆಗೆದುಕೊಂಡರು

   

–ಎಎಫ್‌ಪಿ ಚಿತ್ರ

ವಿಯೆನ್ನಾ: ಆಸ್ಟ್ರೀಯಾ ಪ್ರವಾಸದ ಮೊದಲ ದಿನವಾದ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೀಯಾ ಗಣರಾಜ್ಯದ ಚಾನ್ಸೆಲರ್ ಕಾರ್ಲ್ ನೆಹಮ್ಮೆರ್ ಮತ್ತು ಅಧ್ಯಕ್ಷ ಅಲೆಕ್ಸಾಂಡರ್ ವ್ಯಾನ್‌ ಡೆರ್ ಬೆಲ್ಲೆನ್ ಅವರನ್ನು ಭೇಟಿಯಾಗಿದ್ದು, ಪ್ರಚಲಿತ ವಿದ್ಯಮಾನ ಕುರಿತು ಚರ್ಚಿಸಿದರು.

ADVERTISEMENT

ಉಕ್ರೇನ್‌ ಬಿಕ್ಕಟ್ಟು ಸೇರಿದಂತೆ ಜಗತ್ತನ್ನು ಪ್ರಸ್ತುತ ಬಾಧಿಸುತ್ತಿರುವ ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದು, ‘ಇದು, ಯುದ್ಧದ ಕಾಲವಲ್ಲ’ ಎಂಬುದನ್ನು ಮತ್ತೆ ಪ್ರತಿಪಾದಿಸಿದರು.

ಮಾಸ್ಕೊ ಪ್ರವಾಸದ ಬಳಿಕ ಮೋದಿ ಆಸ್ಟ್ರೀಯಾ ಪ್ರವಾಸವನ್ನು ಕೈಗೊಂಡಿದ್ದು, 40 ವರ್ಷದ ಬಳಿಕ ಇಲ್ಲಿಗೆ ಭೇಟಿ ನೀಡಿದ ಭಾರತದ ಪ್ರಧಾನಿ ಎಂಬ ಹಿರಿಮೆಗೂ ಪಾತ್ರರಾದರು.

‘ಭಾರತ ಮತ್ತು ಆಸ್ಟ್ರೀಯಾ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲು ಹೊಸ ಸಾಧ್ಯತೆಗಳನ್ನು ಗುರುತಿಸಲಾಗಿದೆ. ಮುಂದಿನ ದಶಕದಲ್ಲಿ ಸಾಗಬೇಕಾದ ದಾರಿ ಕುರಿತು ನೀಲನಕ್ಷೆ ಸಿದ್ಧಪಡಿಸುತ್ತಿದೆ’ ಎಂದು ಮೋದಿ ಮತ್ತು ನೆಹಮ್ಮೆರ್ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಉಕ್ರೇನ್‌ ಬಿಕ್ಕಟ್ಟು ಸೇರಿ ಹಲವು ವಿಷಯಗಳನ್ನು ವಿಸ್ತೃತವಾಗಿ ನಾವು ಚರ್ಚಿಸಿದ್ದೇವೆ. ಇದು, ಯುದ್ಧದ ಕಾಲವಲ್ಲ ಎಂಬುದು ನನ್ನ ದೃಢ ನಿಲುವು’ ಎಂದು ಮೋದಿ ಹೇಳಿದರು.

ಯುದ್ಧಭೂಮಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗದು. ಭಾರತ ಮತ್ತು ಆಸ್ಟ್ರೀಯಾ ಎಂದಿಗೂ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡಲಿವೆ. ಈ ದೃಷ್ಟಿಯಿಂದ ಯಾವುದೇ ರೀತಿಯ ಬೆಂಬಲ ನೀಡಲೂ ಸಿದ್ಧ ಎಂದು ಹೇಳಿದರು. 

ಭಯೋತ್ಪಾದನೆ ಕೃತ್ಯಗಳನ್ನು ಉಭಯ ರಾಷ್ಟ್ರಗಳು ಖಂಡಿಸಲಿವೆ. ಯಾವುದೇ ಸ್ವರೂಪದಲ್ಲಿ ಭಯೋತ್ಪಾದನೆಯನ್ನು ಒಪ್ಪಲಾಗದು. ಇದು ಸಮರ್ಥನೀಯವೂ ಅಲ್ಲ ಎಂದು ಮೋದಿ ಹೇಳಿದರು.

ಆಸ್ಟ್ರೀಯಾಗೆ ತಮ್ಮ ಭೇಟಿಯು ಐತಿಹಾಸಿಕವಾಗಿದೆ. 40 ವರ್ಷಗಳಲ್ಲಿ ಭಾರತದ ಯಾವುದೇ ಪ್ರಧಾನಿ ಇಲ್ಲಿಗೆ ಭೇಟಿ ನೀಡಿರಲಿಲ್ಲ ಎಂದರು.

‘ವಿಶ್ವಸಂಸ್ಥೆ ಸೇರಿದಂತೆ ಇತರೆ ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಸಮಕಾಲೀನ ಹಾಗೂ ಪರಿಣಾಮಕಾರಿ ಆಗಿರುವಂತೆ ಸುಧಾರಣೆಗೆ ಒಳಪಡಿಸಲು ನಾವು ಒಪ್ಪಿದ್ದೇವೆ’ ಎಂದು ಹೇಳಿದರು. 

ಅಧ್ಯಕ್ಷರ ಜೊತೆಗಿನ ಭೇಟಿ ಕುರಿತು ‘ಎಕ್ಸ್‌’ನಲ್ಲಿ ಸಂದೇಶ ಹಂಚಿಕೊಂಡಿರುವ ಮೋದಿ ಅವರು, ‘ಬೆಲ್ಲೆನ್‌ ಅವರ ಜೊತೆಗೆ ಉತ್ತಮ ಸಂವಾದ ನಡೆಯಿತು. ಭಾರತ –ಆಸ್ಟ್ರೀಯಾ ಸಹಕಾರ ವೃದ್ಧಿ ಕುರಿತು ವಿಸ್ತೃತವಾಗಿ ಚರ್ಚಿಸಿದೆವು’ ಎಂದು ತಿಳಿಸಿದರು.

ಶಾಂತಿ ಸ್ಥಾಪನೆಯಲ್ಲಿ ಭಾರತದ ಪಾತ್ರ ಮಹತ್ವದ್ದು: ಆಸ್ಟ್ರೀಯಾ

‘ಭಾರತ ಪ್ರಭಾವಿ ಮತ್ತು ವಿಶ್ವಾಸಾರ್ಹ ದೇಶವಾಗಿದೆ. ರಷ್ಯಾ–ಉಕ್ರೇನ್ ಶಾಂತಿ ಪ್ರಕ್ರಿಯೆಯಲ್ಲಿ ಅದರ ಪಾತ್ರ ಮಹತ್ವದ್ದಾಗಿದೆ’ ಎಂದು ಆಸ್ಟ್ರೀಯಾದ ಚಾನ್ಸೆಲರ್ ಕಾರ್ಲ್ ನೆಹಮ್ಮೆರ್ ಹೇಳಿದ್ದಾರೆ.

ಔಪಚಾರಿಕ ಮಾತುಕತೆ ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ನೆಹಮ್ಮೆರ್ ಈ ಮಾತು ಹೇಳಿದರು.

‘ಶಾಂತಿ ಸ್ಥಾಪನೆಯಲ್ಲಿ ರಷ್ಯಾದ ಉದ್ದೇಶ ಕುರಿತಂತೆ ಪ್ರಧಾನಿ ಅವರ ವಿಶ್ಲೇಷಣೆ ತಿಳಿಯುವುದು ನನಗೆ ಮುಖ್ಯವಾಗಿತ್ತು. ಉಕ್ರೇನ್‌ ವಿಷಯದ ಜೊತೆಗೆ ಮಧ್ಯಪ್ರಾಚ್ಯ ದೇಶಗಳ ಪ್ರಚಲಿತ ವಿದ್ಯಮಾನ ಕುರಿತು ಪ್ರಮುಖವಾಗಿ ಚರ್ಚಿಸಿದೆವು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.