ಕೆನಡಿ ಬಾಹ್ಯಾಕಾಶ ಕೇಂದ್ರ, ಅಮೆರಿಕ: ಸ್ಪೇಸ್‌ಎಕ್ಸ್ ತನ್ನ ಮೊದಲ ಪ್ರವಾಸೋದ್ಯಮ ಮಿಷನ್‌ಗೆ ಬುಧವಾರ ಚಾಲನೆ ನೀಡಿದೆ. ಈ ಯೋಜನೆಯಡಿ ಇದೇ ಮೊದಲ ಬಾರಿಗೆ ಕೇವಲ ಕೆಲವೇ ತಿಂಗಳ ತರಬೇತಿ ಪಡೆದಿರುವ ನಾಲ್ವರು ಖಾಸಗಿ ನಾಗರಿಕರನ್ನು ಭೂಮಿಯ ಕಕ್ಷೆಗೆ ಕರೆದೊಯ್ಯಲಾಗುವುದು.
‘ಇನ್‌ಸ್ಪಿರೇಷನ್4’ ಮಿಷನ್‌ನ ಐದು ಗಂಟೆಗಳ ಉಡಾವಣಾ ಅವಧಿಯು ಗುರುವಾರ ರಾತ್ರಿ 8.02ಕ್ಕೆ ಆರಂಭವಾಗಲಿದ್ದು, ಮೂರು ದಿನಗಳ ಕಾಲ ಭೂಮಿಗೆ ಸುತ್ತು ಹಾಕಲಿರುವ ಇವರು, ಬೃಹತ್ ಪ್ಯಾರಾಚೂಟ್‌ಗಳ ಸಹಾಯದಿಂದ ಭೂಮಿಗೆ ಮರಳಲಿದ್ದಾರೆ.
ಫ್ಲಾರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಪ್ರಾಚೀನ ಉಡಾವಣಾ ಸಂಕೀರ್ಣ 39ಎ ದಿಂದ ಡ್ರ್ಯಾಗನ್ ಕ್ಯಾಪ್ಯ್ಸೂಲ್ ಅನ್ನು ಹೊತ್ತ ‘ಫಾಲ್ಕನ್–9’ ರಾಕೆಟ್ ನಭಕ್ಕೆ ನೆಗೆಯಲಿದೆ.
ಶಿಫ್ಟ್4 ಪೇಮೆಂಟ್ಸ್ ಸಂಸ್ಥೆಯ ಸ್ಥಾಪಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನೇ ಅರ್ಧಕ್ಕೆ ಮೊಟಕುಗೊಳಿಸಿರುವ ಜಾರೆಡ್ ಐಸಾಕ್ಮನ್ ಅವರು ಭೂಮಿ ಕಕ್ಷೆಯ ಪ್ರವಾಸ ಕೈಗೊಳ್ಳುತ್ತಿದ್ದು, ಸ್ಪರ್ಧೆಯೊಂದರಲ್ಲಿ ಆರಿಸಲ್ಪಟ್ಟ ಮೂವರು ಅವರ ಜತೆಗೆ ನಭಕ್ಕೆ ತೆರಳಲಿದ್ದಾರೆ
ಈ ಯೋಜನೆಗಾಗಿ ಜಾರೆಡ್ ಎಷ್ಟು ಹಣ ಪಾವತಿಸಿದ್ದಾರೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ. ಆದರೆ ಹತ್ತಾರು ದಶಲಕ್ಷ ಡಾಲರ್ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.