ಸ್ಯಾನ್‌ಫ್ರಾನ್ಸಿಸ್ಕೊ: ಒಂದು ವಾರದಿಂದ ಕ್ಯಾಲಿಫೋರ್ನಿಯಾದ ಕೊಲ್ಲಿಭಾಗದ ಅರಣ್ಯದಲ್ಲಿ ಸಂಭವಿಸುತ್ತಿರುವ ಕಾಳ್ಗಿಚ್ಚಿನಿಂದಾಗಿ 1 ಕೋಟಿ ಎಕರೆಗೂ ಹೆಚ್ಚು ವಿಸ್ತೀರ್ಣದ ಅರಣ್ಯ ಪ್ರದೇಶ ನಾಶವಾಗಿದೆ.
ಕಾಳ್ಗಿಚ್ಚಿನ ವೇಗ ಶನಿವಾರವೂ ಹೆಚ್ಚಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟು ಹರಡುತ್ತಿದ್ದ ಬೆಂಕಿಯ ವೇಗವನ್ನು ತಪ್ಪಿಸಿದ್ದಾರೆ.
ಆಗಸ್ಟ್ 15ರಿಂದ ಕ್ಯಾಲಿಫೋರ್ನಿಯಾದ ಅರಣ್ಯ ಪ್ರದೇಶದಲ್ಲಿ ಭುಗಿಲೆದ್ದಿರುವ ಕಾಳ್ಚಿಗಿಚ್ಚಿನಿಂದ ಒಂದು ಕೋಟಿ ಎಕರೆ ಪ್ರದೇಶದಷ್ಟು ಅರಣ್ಯ ಬೆಂಕಿಗೆ ಆಹುತಿಯಾಗಿದೆ. ಅರಣ್ಯದಂಚಿನ ಕೌಂಟಿಗಳಲ್ಲಿ ವಾಸಿಸುತ್ತಿದ್ದ ನೂರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಪತ್ತು ನಿರ್ವಹಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಘೋಷಿಸಿದ್ದಾರೆ. ’ಈ ಘೋಷಣೆಯಿಂದಾಗಿ ಕಾಳ್ಗಿಚ್ಚಿನಿಂದ ಮನೆ, ಕುಟುಂಬಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ನೆರವು ಸಿಗಲಿದೆ’ ಎಂದು ಗವರ್ನರ್ ಗೇವಿನ್ ನ್ಯೂಸಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಹವಾಮಾನ ಇಲಾಖೆ ಕ್ಯಾಲಿಫೋರ್ನಿಯಾದ ಬೇ ಏರಿಯಾ ಮತ್ತು ಮಧ್ಯ ಕರಾವಳಿಯಾದ್ಯಂತ ಭಾನುವಾರದಿಂದ ಸೋಮವಾರ ಮಧ್ಯಾಹ್ನದವರೆಗೆ ’ರೆಡ್ ಅಲರ್ಟ್’ ಘೋಷಿಸಿದೆ.
’ನಮಗೆ ಅಂತ ಅಪಾಯವೇನಿಲ್ಲ. ಆದರೆ ಎದುರಾಗಿರುವ ಸಮಸ್ಯೆಯ ವಿರುದ್ಧ ಹೋರಾಡುತ್ತಿದ್ದೇವೆ’ ಎಂದು ಕ್ಯಾಲಿಫೋರ್ನಿಯಾ ಅರಣ್ಯ ಮತ್ತು ಅಗ್ನಿಶಾಮಕ ರಕ್ಷಣೆ ಮುಖ್ಯಸ್ಥ ಥಾಮ್ ಪೋರ್ಟರ್ ಟ್ವೀಟ್ ಮಾಡಿದ್ದಾರೆ.
ಹವಾಮಾನ ವೈಪರೀತ್ಯದ ಕಾರಣ, ಒಂದು ವಾರದಿಂದ ಕ್ಯಾಲಿಫೋರ್ನಿಯಾ ವ್ಯಾಪ್ತಿಯ ಕೊಲ್ಲಿ ಅರಣ್ಯ ಪ್ರದೇಶದಲ್ಲಿ ಉಂಟಾದ ಕಾಳ್ಗಿಚ್ಚಿನಿಂದ 1 ಕೋಟಿ ಎಕರೆಯಷ್ಟು ಅರಣ್ಯ ಪ್ರದೇಶ ನಾಶವಾಗಿ. ಅರಣ್ಯದ ಅಂಚಿನಲ್ಲಿದ್ದ ಗ್ರಾಮಗಳು ಕಾಳ್ಗಿಚ್ಚಿನ ಕೆನ್ನಾಲಿಗೆಗೆ ಆಹುತಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.