ವಾಷಿಂಗ್ಟನ್: ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಈ ಹಿನ್ನೆಲೆಯಲ್ಲಿ ತನ್ನ ನಾಗರಿಕರು ಬಾಂಗ್ಲಾದೇಶಕ್ಕೆ ಪ್ರಯಾಣಿಸದಂತೆ ಅಮೆರಿಕ ಸೂಚಿಸಿದೆ.
ಪ್ರತಿಭಟನೆ ನಡೆಯುತ್ತಿರುವ ಬಾಂಗ್ಲಾದೇಶದ ಹಲವೆಡೆ ಶನಿವಾರ ಕಠಿಣ ನಿಷೇಧಾಜ್ಞೆ ಮುಂದುವರಿದಿತ್ತು. ರಾಜಧಾನಿ ಢಾಕಾದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಿಗಾವಹಿಸುವ ಸಲುವಾಗಿ ಭದ್ರತಾ ಪಡೆಗಳು ಪಹರೆ ಕಾರ್ಯದಲ್ಲಿ ನಿರತವಾಗಿವೆ.
ಇಲ್ಲಿಯವರೆಗೆ 103 ಮಂದಿ ಮೃತಪಟ್ಟಿದ್ದಾರೆ ಎಂದು ಡೈಲಿ ಪ್ರೊಥೊಮ್ ಅಲೋ ಸುದ್ದಿಪತ್ರಿಕೆ ವರದಿ ಮಾಡಿದೆ. ಹಿಂಸಾಚಾರದಲ್ಲಿ ಸುಮಾರು ಸಾವಿರ ಮಂದಿ ಗಾಯಗೊಂಡಿದ್ದಾರೆ ಎಂದು ಢಾಕಾದಲ್ಲಿಯ ಅಮೆರಿಕ ರಾಯಭಾರ ಕಚೇರಿಯು ವರದಿ ಮಾಡಿದೆ.
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಅಲ್ಲಿಗೆ ಪ್ರಯಾಣಿಸಬೇಡಿ ಎಂದು ನಾಗರಿಕರಿಗೆ ಅಮೆರಿಕದ ಆಂತರಿಕ ಸಚಿವಾಲಯ ಸೂಚಿಸಿದೆ. ಅಲ್ಲದೆ ತುರ್ತು ಅಗತ್ಯವಿರದ ಸರ್ಕಾರಿ ನೌಕರರು ತಮ್ಮ ಕುಟುಂಬದೊಂದಿಗೆ ಸ್ವಯಂಪ್ರೇರಿತವಾಗಿ ನಿರ್ಗಮಿಸಲೂ ಅನುಮತಿ ನೀಡಿದೆ.
ಬಾಂಗ್ಲಾದೇಶ ಸರ್ಕಾರ ದೇಶದಾದ್ಯಂತ ಕರ್ಫ್ಯೂ ಘೋಷಿಸಿದೆ. ಎಲ್ಲರೂ ಮನೆಯೊಳಗೆ ಇರುವಂತೆ ಆದೇಶಿಸಿದೆ. ಪೊಲೀಸರನ್ನು ಬಲಪಡಿಸಲು ಸೇನೆಯನ್ನು ದೇಶದಾದ್ಯಂತ ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.