ಜಿನಿವಾ/ವಿಶ್ವಸಂಸ್ಥೆ: ಕೆಲ ರಾಷ್ಟ್ರಗಳಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿವೆ. ಇದು ಬರುವ ದಿನಗಳಲ್ಲಿ ಕೋವಿಡ್ ಪಿಡುಗು ವ್ಯಾಪಿಸುವ ಸೂಚನೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಹಾ ನಿರ್ದೇಶಕ ಟೆಡ್ರೋಸ್ ಅಧನೋಮ್ ಗೆಬ್ರಿಯೇಸಸ್ ಬುಧವಾರ ಎಚ್ಚರಿಸಿದ್ದಾರೆ.
‘ಕೋವಿಡ್‌ಗೆ ಸಂಬಂಧಿಸಿ ಪ್ರತಿ ದೇಶದ ಪರಿಸ್ಥಿತಿ ಬೇರೆ ಇದ್ದು, ಅವುಗಳು ಎದುರಿಸುತ್ತಿರುವ ಸವಾಲುಗಳು ಸಹ ವಿಭಿನ್ನವಾಗಿವೆ. ಹೀಗಾಗಿ ಕೋವಿಡ್ ಪಿಡುಗು ಮುಕ್ತಾಯವಾಗಿದೆ ಎಂಬುದಾಗಿ ಭಾವಿಸಬಾರದು’ ಎಂದು ಹೇಳಿದ್ದಾರೆ.
ಏಷ್ಯಾ ರಾಷ್ಟ್ರಗಳು ಸೇರಿದಂತೆ ಅನೇಕ ದೇಶಗಳಲ್ಲಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ.
‘ಈ ವಿಷಯದಲ್ಲಿ ಎಲ್ಲ ದೇಶಗಳು ಹೆಚ್ಚು ಜಾಗರೂಕತೆಯಿಂದ ಇರಬೇಕು. ಲಸಿಕೆ ನೀಡುವುದು, ಪರೀಕ್ಷೆ, ಕೋವಿಡ್ ಪೀಡಿತರಿಗೆ ಬೇಗನೆ ಚಿಕಿತ್ಸೆ ಆರಂಭಿಸುವಂತಹ ಕ್ರಮಗಳಿಗೆ ಒತ್ತು ನೀಡಬೇಕು. ಆರೋಗ್ಯ ಕಾರ್ಯಕರ್ತರ ಸುರಕ್ಷತೆಗೂ ಗಮನ ಹರಿಸಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.
‘ಕೋವಿಡ್ ಹಿನ್ನೆಲೆಯಲ್ಲಿ ವಿಧಿಸಿದ್ದ ನಿರ್ಬಂಧಗಳನ್ನು ಹಲವೆಡೆ ತೆರವು ಮಾಡಲಾಗಿದೆ. ಈ ಪ್ರದೇಶಗಳಲ್ಲಿಯೇ ಈಗ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಮರಣ ಪ್ರಮಾಣವೂ ಅಧಿಕವಾಗಿದೆ. ಅದರಲ್ಲೂ, ಲಸಿಕೆ ನೀಡಿಕೆ ಪ್ರಮಾಣ ಕಡಿಮೆ ಇರುವ ದೇಶಗಳಲ್ಲಿ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.