ADVERTISEMENT

ಹುದ್ದೆ ತ್ಯಜಿಸದಿದ್ದರೆ ವಾಗ್ದಂಡನೆ: ಅಧಿಕಾರದ ಕೊನೆಯಲ್ಲಿ ಟ್ರಂಪ್‌ಗೆ ಸಂಕಷ್ಟ

ಏಜೆನ್ಸೀಸ್
Published 10 ಜನವರಿ 2021, 4:31 IST
Last Updated 10 ಜನವರಿ 2021, 4:31 IST
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌   

ವಾಷಿಂಗ್ಟನ್‌: ಅಮೆರಿಕ ಕ್ಯಾಪಿಟಲ್‌ ಮೇಲಿನ ದಾಳಿ ಮತ್ತು ಹಿಂಸಾಚಾರದ ನಂತರವೂ ಹುದ್ದೆ ತ್ಯಜಿಸಲು ನಿರಾಕರಿಸಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಿರುದ್ಧ ವಾಗ್ದಂಡನೆ ಮಂಡಿಸಲು ಡೆಮಾಕ್ರಟಿಕ್‌‌ ಪಕ್ಷದ ಸಂಸದರು ಮುಂದಾಗಿದ್ದಾರೆ.

ಹಾಗೇನಾದರೂ ಡೆಮಾಕ್ರಟಿಕ್‌ ಪಕ್ಷ ನಿರ್ಣಯ ಮಂಡಿಸಿದ್ದೇ ಆದರೆ, ಟ್ರಂಪ್‌ ವಿರುದ್ಧದ ಎರಡನೇ ವಾಗ್ದಂಡನೆ ಪ್ರಕ್ರಿಯೆ ಇದಾಗಲಿದೆ.

ಸೋಮವಾರದಿಂದಲೇ ವಾಗ್ದಂಡನೆ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಗಳಿವೆ ಎಂದು ಡೆಮಾಕ್ರಟಿಕ್‌ನ‌ ಸಂಸದರು ಹೇಳಿದ್ದಾರೆ. ವಾಗ್ದಂಡನೆ ಎಂಬುದು ದೀರ್ಘಾವಧಿ ಪ್ರಕ್ರಿಯೆಯಾಗಿದ್ದು, ಪೂರ್ಣಗೊಳ್ಳಲು ಹಲವು ವಾರಗಳೇ ಬೇಕಾಗುತ್ತವೆ. ಹೀಗಾಗಿ ಜೋ ಬೈಡನ್‌ ಅವರು ಅಧಿಕಾರ ವಹಿಸಿಕೊಳ್ಳುವ ಜ.20ರ ವೇಳೆಗೆ ಟ್ರಂಪ್‌ ವಿರುದ್ಧದ ವಾಗ್ದಂಡನೆ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆಗಳಿಲ್ಲ.

ಟ್ರಂಪ್ ಅವರಾಗಿಯೇ ರಾಜೀನಾಮೆ ನೀಡದೇ ಹೋದರೆ, ಅಥವಾ ಅಧ್ಯಕ್ಷರನ್ನು ಕ್ಯಾಬಿನೆಟ್‌ ವಜಾ ಮಾಡುವ 25ನೇ ತಿದ್ದುಪಡಿಯನ್ನು ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅವರು ಮಂಡಿಸದೇ ಹೋದರೆ ಡೆಮಾಕ್ರಟಿಕ್‌ನ‌ ಸಂಸದರು ವಾಗ್ದಂಡನೆ ಪ್ರಕ್ರಿಯೆ ಆರಂಭಿಸುತ್ತಾರೆ ಎಂದು ಸ್ಪೀಕರ್ ನ್ಯಾನ್ಸಿ ಪೆಲೋಸಿ ಎಚ್ಚರಿಸಿದ್ದಾರೆ.

'ಅವರು ಗೊಂದಲಕ್ಕೊಳಗಾಗಿದ್ದಾರೆ, ಆತಂಕಕ್ಕೊಳಗಾಗಿದ್ದಾರೆ ಮತ್ತು ಅಪಾಯಕಾರಿಯಾಗಿ ಪರಿಣಮಿಸಿದ್ದಾರೆ. ಅವರು ಸ್ಥಾನ ತೊರೆಯಲೇಬೇಕು' ಎಂದು ಪೆಲೋಸಿ ಟ್ರಂಪ್ ಅವರನ್ನು ಉಲ್ಲೇಖಿಸಿ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ಉದ್ರಿಕ್ತ ಟ್ರಂಪ್ ಬೆಂಬಲಿಗರು ಕಳೆದ ಬುಧವಾರ ಕ್ಯಾಪಿಟಲ್ ಮೇಲೆ ನಡೆಸಿದ ದಾಳಿ ಮತ್ತು ಘಟನೆಯಲ್ಲಿ ಪೊಲೀಸರು ಸೇರಿ ಐವರು ಮೃತಪಟ್ಟ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷರಿಗೆ ವಾಗ್ದಂಡನೆ ಭೀತಿ ಎದುರಾಗಿದೆ.

ಡೆಮಾಕ್ರಟಿಕ್‌ ಪ್ರಕ್ಷದ ಸಂಸದ ಟೆಡ್ ಲಿಯು ಪ್ರಕಾರ, ಅಮೆರಿಕ ಕಾಂಗ್ರೆಸ್‌ನ ಕನಿಷ್ಠ 180 ಸದಸ್ಯರು ಟ್ರಂಪ್‌ ಮೇಲೆ ಆರೋಪ ಹೊರಿಸಿ, ವಾಗ್ದಂಡನೆ ಪ್ರಸ್ತಾವದ ಕಡತಕ್ಕೆ ಸಹಿ ಮಾಡಿದ್ದಾರೆ. ಅಧ್ಯಕ್ಷ ಟ್ರಂಪ್ ಅಮೆರಿಕದ ಸಂಸ್ಥೆಗಳ ಭದ್ರತೆಗೆ ತೀವ್ರ ಅಪಾಯವನ್ನುಂಟುಮಾಡಿದ್ದಾರೆ. ಅವರು ಪ್ರಜಾಪ್ರಭುತ್ವ ವ್ಯವಸ್ಥೆಯ ಸಮಗ್ರತೆಗೆ ಬೆದರಿಕೆ ಹಾಕಿದ್ದಾರೆ. ಅಧಿಕಾರದ ಶಾಂತಿಯುತ ಹಸ್ತಾಂತರದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಸರ್ಕಾರದ ಸಮನ್ವಯ ಶಾಖೆಯನ್ನು ದುರ್ಬಲಗೊಳಿಸಿದ್ದಾರೆ,' ಎಂದು ಅದರಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.