ನ್ಯೂಯಾರ್ಕ್: ದಕ್ಷಿಣ ಏಷ್ಯಾದ ಹಲವು ನೆರೆಯ ರಾಷ್ಟ್ರಗಳಿಗೆ ಕೋವಿಡ್-19 ಲಸಿಕೆಗಳನ್ನು ಸರಬರಾಜು ಮಾಡಿರುವ ಭಾರತವನ್ನು ಶ್ಲಾಘಿಸಿರುವ ಜೋ ಬೈಡನ್ ನೇತೃತ್ವದ ಅಮೆರಿಕದ ನೂತನ ಸರಕಾರವು, ಭಾರತ 'ನಿಜವಾದ ಸ್ನೇಹಿತ' ಎಂದು ಬಣ್ಣಿಸಿದೆ.
ಕೊರೊನಾ ವೈರಸ್ ಪಿಡುಗಿನ ವಿರುದ್ಧ ಹೋರಾಡಲು ಜಾಗತಿಕ ಸಮುದಾಯಕ್ಕೆ ಸಹಾಯ ಮಾಡಲು ತನ್ನ ಔಷಧೀಯ ವಲಯವನ್ನು ಬಳಕೆ ಮಾಡುತ್ತಿರುವ ಭಾರತವು ನಿಜವಾದ ಸ್ನೇಹಿತ ಎಂದು ಅಮೆರಿಕ ಶ್ಲಾಘಿಸಿದೆ.
ಜಾಗತಿಕ ಆರೋಗ್ಯದಲ್ಲಿ ಭಾರತದ ಪಾತ್ರವನ್ನು ನಾವು ಶ್ಲಾಘಿಸುತ್ತೇವೆ. ದಕ್ಷಿಣ ಏಷ್ಯಾದಲ್ಲಿ ಲಕ್ಷಾಂತರ ಪ್ರಮಾಣದ ಕೋವಿಡ್-19 ಲಸಿಕೆಗಳನ್ನು ಹಂಚಿಕೊಳ್ಳುತ್ತಿದೆ ಎಂದು ಉಲ್ಲೇಖಿಸಿದೆ.
'ನೆರೆಹೊರೆಯವರಿಗೆ ಮೊದಲ ಆದ್ಯತೆ' ಎಂಬ ನೀತಿಯೊಂದಿಗೆ ಭಾರತವು ಈಗಾಗಲೇ ಮಾಲ್ಡೀವ್ಸ್, ಭೂತಾನ್, ಬಾಂಗ್ಲಾದೇಶ ಮತ್ತು ನೇಪಾಳ ರಾಷ್ಟ್ರಗಳಿಗೆ ಉಚಿತ ಲಸಿಕೆಯನ್ನು ವಿತರಿಸಿದೆ.
ಜನವರಿ 16ರಂದು ವಿಶ್ವದ ಅತಿ ದೊಡ್ಡ ಕೊರೊನಾ ವೈರಸ್ ಲಸಿಕೆ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ದೇಶದಲ್ಲಿ ಎರಡು ಲಸಿಕೆಗಳ ಬಳಕೆಗೆ ಅನುಮೋದನೆ ನೀಡಲಾಗಿದ್ದು, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ ಮುಂಚೂಣಿಯ ಸೇನಾನಿಗಳಿಗೆ ನೀಡಲಾಗುತ್ತಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ 'ಕೋವಿಶೀಲ್ಡ್' ಲಸಿಕೆಯನ್ನು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆ. ಅತ್ತ 'ಕೋವ್ಯಾಕ್ಸಿನ್' ಲಸಿಕೆಯನ್ನು ಭಾರತೀಯ ವೈದ್ಯಕೀಯ ಪರಿಷತ್ (ಐಸಿಎಂಆರ್) ಸಹಯೋಗದಲ್ಲಿ ಹೈದರಾಬಾದ್‌ನ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದೆ.
ನೆರೆಯ ರಾಷ್ಟ್ರಗಳಿಗೆ ಭಾರತ ಕೋವಿಡ್-19 ಲಸಿಕೆಹಂಚಿರುವಪಟ್ಟಿ:
ಭೂತಾನ್: 1.5 ಲಕ್ಷ ಡೋಸ್
ಮಾಲ್ಡೀವ್ಸ್: 1 ಲಕ್ಷ ಡೋಸ್
ಬಾಂಗ್ಲಾದೇಶ: 20 ಲಕ್ಷಕ್ಕೂ ಹೆಚ್ಚು ಡೋಸ್
ನೇಪಾಳ: 10 ಲಕ್ಷ ಡೋಸ್
ಜಾಗತಿಕ ಸಮುದಾಯಕ್ಕೆ ನೆರವಾಗುವುದರ ಭಾಗವಾಗಿ ಭಾರತವು ಅಗತ್ಯ ರಾಷ್ಟ್ರಗಳಿಗೆ ಕೋವಿಡ್-19 ಲಸಿಕೆಗಳನ್ನು ಪೂರೈಸಲಿದೆ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.