ಬಿಷ್‌ಕೆಕ್(ಕಿರ್ಗಿಸ್ತಾನ): ಕಿರ್ಗಿಸ್ತಾನದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಭಾರತ ಸಾಲದ ರೂಪದಲ್ಲಿ ₹1507.25 ಕೋಟಿ (200 ಮಿಲಿಯನ್ ಡಾಲರ್) ನೆರವು ನೀಡಲು ಒಪ್ಪಿರುವುದಾಗಿ ವಿದೇಶಾಂಗ ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಕಿರ್ಗಿಸ್ತಾನ ಸೇರಿದಂತೆ ಮೂರು ಮಧ್ಯ ಏಷ್ಯಾರಾಷ್ಟ್ರಗಳಿಗೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿರುವ ಜೈಶಂಕರ್, ಪ್ರವಾಸದ ಭಾಗವಾಗಿ ಭಾನುವಾರ ಕಿರ್ಗಿಸ್ತಾನದ ನಾಯಕರೊಂದಿಗೆ ಮಾತುಕತೆ ನಡೆಸಿದ ನಂತರ ಈ ವಿಷಯ ತಿಳಿಸಿದ್ದಾರೆ.
ಕಿರ್ಗಿಸ್ತಾನ ಮತ್ತು ಅರ್ಮೇನಿಯಾ ಸೇರಿದಂತೆ ಮೂರು ಮಧ್ಯ ಏಷ್ಯಾ ರಾಷ್ಟ್ರಗಳೊಂದಿಗಿನ ದ್ವಿಪಕ್ಷೀಯ ಒಪ್ಪಂದಗಳ ವಿಸ್ತರಣೆ ಕುರಿತು ಚರ್ಚೆ ನಡೆಸುವುದು ಈ ಪ್ರವಾಸದ ಉದ್ದೇಶವಾಗಿದೆ.
ಉಭಯ ರಾಷ್ಟ್ರಗಳ ನಾಯಕರ ನಡುವೆ ನಡೆದ ರಚನಾತ್ಮಕ ಮಾತುಕತೆಯಲ್ಲಿ‘ರಕ್ಷಣಾ ಸಹಕಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ದ್ವಿಪಕ್ಷೀಯ ಒಪ್ಪಂದಗಳ ಬಲವರ್ಧನೆಗೊಳಿಸುವುದು ಹಾಗೂ ಅಫ್ಗಾನಿಸ್ತಾನ ಸೇರಿದಂತೆ ಜಾಗತಿಕ ಮಟ್ಟದ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ.
‘ಕಿರ್ಗಿಸ್ತಾನ ಗಣರಾಜ್ಯದ ವಿದೇಶಾಂಗ ಸಚಿವ ಎಫ್ ಎಂ ರುಸ್ಲಾನ್ ಕಜಕ್ ಬೇವ್ ಅವರೊಂದಿಗೆ ಸೌಹಾರ್ದಯುತ ಮತ್ತು ರಚನಾತ್ಮಕ ಮಾತುಕತೆಗಳು ನಡೆದಿವೆ. ಈ ದೇಶದಲ್ಲಿನ ಅಭಿವೃದ್ಧಿ ಯೋಜನೆಗಳನ್ನು ಬೆಂಬಲಿಸಲು ಭಾರತ ₹1507.25 ಕೋಟಿ (200 ಮಿ.ಡಾಲರ್) ಹಣವನ್ನು ಸಾಲದ ರೂಪದಲ್ಲಿ ನೀಡಲು ಒಪ್ಪಿಕೊಂಡಿದೆ‘ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.