ಸಿಂಗಪುರ: ‘ರಷ್ಯಾ ಜೊತೆ ಭಾರತ ಯಾವಾಗಲೂ ಉತ್ತಮ ಬಾಂಧವ್ಯ ಹೊಂದಿದೆ. ಎರಡೂ ದೇಶಗಳು ಪರಸ್ಪರರ ಹಿತಾಸಕ್ತಿಗಳ ಕುರಿತು ಹೆಚ್ಚು ಮುತುವರ್ಜಿ ವಹಿಸಿವೆ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾನುವಾರ ಹೇಳಿದ್ದಾರೆ.
ಸಿಂಗಪುರ ಪ್ರವಾಸದಲ್ಲಿರುವ ಅವರು, ಇಲ್ಲಿನ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು.
‘ಭಾರತವು ರಷ್ಯಾ ಅಥವಾ ಇತರ ಯಾವುದೇ ದೇಶದೊಂದಿಗೆ ತನ್ನದೇ ದೃಷ್ಟಿಕೋನದಿಂದ ವ್ಯವಹರಿಸುತ್ತದೆ’ ಎಂದ ಅವರು, ‘ರಷ್ಯಾ ಇತ್ತೀಚೆಗೆ ಚೀನಾಕ್ಕೆ ಹತ್ತಿರವಾಗುತ್ತಿದೆ’ ಎಂಬ ಮಾತುಗಳನ್ನು ಅಲ್ಲಗಳೆದರು.
‘ರಷ್ಯಾ ನಮಗೆ ಸಹಾಯ ಮಾಡಿದೆಯೇ ಅಥವಾ ಹಾನಿ ಮಾಡಿದೆಯೇ ತಿಳಿಸಿ. ನಿರ್ಣಾಯಕ ಸಂದರ್ಭಗಳಲ್ಲಿ ರಷ್ಯಾ ನಮಗೆ ನೆರವಿನ ಹಸ್ತ ಚಾಚಿದೆಯೇ ಅಥವಾ ಅಡಚಣೆ ಉಂಟು ಮಾಡಿದೆಯೇ? ರಷ್ಯಾದೊಂದಿಗೆ ಸಂಬಂಧ ಮುಂದುವರಿಸುವುದರಿಂದ ನಮಗೆ ಪ್ರಯೋಜನವಾಗಲಿದೆಯೇ ಅಥವಾ ಕೇವಲ ತೊಂದರೆ ಅನುಭವಿಸಬೇಕಾಗುತ್ತದೆಯೇ ಹೇಳಿ’ ಎಂದು ಸಭಿಕರಿಂದ ತೂರಿ ಬಂದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕುರಿತ ಮತ್ತೊಂದು ಪ್ರಶ್ನೆಗೆ, ‘ಈ ವಿಚಾರವಾಗಿ ನಾನು ಕಾದು ನೋಡುತ್ತೇನೆ. ಆದರೆ, ಅಮೆರಿಕ ಅಧ್ಯಕ್ಷರಾಗಿ ಯಾರೇ ಚುನಾಯಿತರಾದರೂ ಅವರೊಂದಿಗೆ ಭಾರತ ಉತ್ತಮ ಬಾಂಧವ್ಯ ಹೊಂದಿರಲಿದೆ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.