ನವದೆಹಲಿ: ಪಪುವಾ ನ್ಯೂಗಿನಿಯಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ಭಾರಿ ಹಾನಿ ಉಂಟಾಗಿದೆ. ಸಂತ್ರಸ್ತರಿಗೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಭಾರತವು ಇಂದು (ಮಂಗಳವಾರ) ಒಂದು ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು ₹8.3 ಕೋಟಿ) ತುರ್ತು ಆರ್ಥಿಕ ನೆರವನ್ನು ಘೋಷಿಸಿದೆ.
ಮೇ 24ರಂದು ಪಪುವಾ ನ್ಯೂಗಿನಿಯಲ್ಲಿ ಸಂಭವಿಸಿದ್ದ ಭಾರಿ ಭೂಕುಸಿತದಲ್ಲಿ 2,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಪಪುವಾ ನ್ಯೂಗಿನಿಯಲ್ಲಿ ಉಂಟಾಗಿದ್ದ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ನೆರವು ನೀಡಲು ಭಾರತ ಸಿದ್ಧವಿದೆ ಎಂದು ತಿಳಿಸಿದ್ದರು.
ಭಾರತ–ಪೆಸಿಫಿಕ್ ದ್ವೀಪ ರಾಷ್ಟ್ರಗಳ ಸಹಕಾರ ವೇದಿಕೆಯ (ಎಫ್‌ಐಪಿಐಸಿ) ಆಪ್ತ ಸ್ನೇಹಿತ ಹಾಗೂ ಪಾಲುದಾರನಾಗಿ ಪಪುವಾ ನ್ಯೂಗಿನಿಯ ಜನರೊಂದಿಗೆ ಒಗ್ಗಟ್ಟಿನ ಸೂಚಕವಾಗಿ ಭಾರತ ಸರ್ಕಾರವು, ಹಾನಿಗೊಳಗಾದ ಜನರ ಪುನರ್ವಸತಿ ಮತ್ತು ಪುನರ್‌ನಿರ್ಮಾಣದ ಭಾಗವಾಗಿ ಒಂದು ಮಿಲಿಯನ್ ಅಮೆರಿಕನ್ ಡಾಲರ್ ತುರ್ತು ನೆರವನ್ನು ಘೋಷಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ತಿಳಿಸಿದೆ.
ಪಪುವಾ ನ್ಯೂಗಿನಿಯಲ್ಲಿ ಉಂಟಾದ ಹಾನಿಯು ತೀವ್ರ ನೋವನ್ನುಂಟು ಮಾಡಿದೆ. ಪಪುವಾ ನ್ಯೂಗಿನಿ ಜನರೊಂದಿಗೆ ನಾವಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಹೇಳಿದ್ದರು.
2018 ಹಾಗೂ 2019ರಲ್ಲಿ ಪಪುವಾ ನ್ಯೂಗಿನಿಯಲ್ಲಿ ಪ್ರಕೃತಿ ವಿಕೋಪದಿಂದ ಹಾನಿ ಸಂಭವಿಸಿದ್ದಾಗಲೂ ಭಾರತ ನೆರವು ಘೋಷಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.