ಬಾಕು (ಅಜರ್‌ಬೈಜಾನ್): ತಂತ್ರಜ್ಞಾನ ಹಂಚಿಕೊಳ್ಳುವಿಕೆಗೆ ಇರುವ ಅಡ್ಡಿಗಳನ್ನು ನಿವಾರಿಸುವಂತೆ ಹಾಗೂ ಹವಾಮಾನ ಬದಲಾವಣೆ ತಡೆ ಕಾರ್ಯಕ್ರಮಗಳಿಗೆ ಹೆಚ್ಚಿನ ಹಣಕಾಸು ನೆರವು ನೀಡುವಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಭಾರತ ಕರೆ ನೀಡಿದೆ. ಅಲ್ಲದೆ, ಹವಾಮಾನ ಬದಲಾವಣೆ ತಗ್ಗಿಸುವ ನೆಪದಲ್ಲಿ ನ್ಯಾಯವಲ್ಲದ ವ್ಯಾಪಾರ ಕ್ರಮಗಳನ್ನು ಜರುಗಿಸಬಾರದು ಎಂದೂ ಹೇಳಿದೆ.
ಇಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ತಡೆ ಸಮಾವೇಶದ (ಸಿಒಪಿ29) ‘2030ರ ಪೂರ್ವದ ಮಹಾತ್ವಾಕಾಂಕ್ಷೆ’ ಹೆಸರಿನ ಸಭೆಯಲ್ಲಿ ಭಾರತ ಈ ಮನವಿ ಮಾಡಿದೆ.
ಹವಾಮಾನ ಬದಲಾವಣೆ ತಡೆಗೆ ಅಭಿವೃದ್ಧಿಶೀಲ ರಾಷ್ಟ್ರಗಳು ಶುದ್ಧ ಇಂಧನ ಹಾಗೂ ಇಂಗಾಲ ಹೊರಸೂಸುವಿಕೆ ತಗ್ಗಿಸುವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಆದರೆ, ಈ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ‘ಬೌದ್ಧಿಕ ಆಸ್ತಿ ಹಕ್ಕು’ ಅಡ್ಡಿಯಾಗುತ್ತಿದೆ. ಹೀಗಾಗಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಈ ನವೀಕೃತ ತಂತ್ರಜ್ಞಾನಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳೊಡನೆ ಮುಕ್ತವಾಗಿ ಹಂಚಿಕೊಳ್ಳಬೇಕು ಎಂದು ಭಾರತದ ಪರಿಸರ ಕಾರ್ಯದರ್ಶಿ ಲೀನಾ ನಂದನ್ ಪ್ರತಿಪಾದಿಸಿದ್ದಾರೆ.
2030ರ ವೇಳೆಗೆ ‘ಶೂನ್ಯ ಇಂಗಾಲ ಹೊರಸೂಸುವ ರಾಷ್ಟ್ರ’ಗಳಾಗಲು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮುಂದೆ ಬರಬೇಕು. ಹವಾಮಾನ ಬದಲಾವಣೆ ತಡೆ ಕಾರ್ಯಕ್ರಮಗಳಿಗೆ ಹೆಚ್ಚಿನ ಹಣಕಾಸು ನೆರವು ನೀಡುವುದು ಹಾಗೂ ಈ ಸಂಬಂಧಿತ ಯೋಜನೆಗಳಿಗೆ ಬಂಡವಾಳ ಹೂಡಲು ಮುಂದಾಗಬೇಕು ಎಂದೂ ಲೀನಾ ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.