ADVERTISEMENT

ಭಾರತ– ಬಾಂಗ್ಲಾದೇಶ ಗಡಿ ಮಾತುಕತೆ ಮುಂದೂಡಿಕೆ

ಪಿಟಿಐ
Published 25 ಅಕ್ಟೋಬರ್ 2024, 16:37 IST
Last Updated 25 ಅಕ್ಟೋಬರ್ 2024, 16:37 IST

ನವದೆಹಲಿ: ಭಾರತ ಹಾಗೂ ಬಾಂಗ್ಲಾದೇಶದ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ, ನವದೆಹಲಿಯಲ್ಲಿ ಮುಂದಿನ ತಿಂಗಳು ಡಿಜಿ ಹಂತದ ಅಧಿಕಾರಿಗಳ ನಡುವೆ ನಿಗದಿಯಾಗಿದ್ದ ಸಭೆಯನ್ನು ಮುಂದೂಡಲಾಗಿದೆ. ನೆರೆರಾಷ್ಟ್ರವು ಮಾತುಕತೆ ಯೋಜನೆಯಲ್ಲಿ ಬದಲಾವಣೆ ಮಾಡಿರುವುದೇ ಇದಕ್ಕೆ ಕಾರಣ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಹಾಗೂ ಬಾಂಗ್ಲಾದೇಶ ಗಡಿ ಭದ್ರತಾ ಪಡೆ (ಬಿಜಿಬಿ) ಅಧಿಕಾರಿಗಳ ಜತೆ ಎರಡು ವರ್ಷಗಳಿಗೊಮ್ಮೆ ನಡೆಯುವ ಸಭೆಯು ಇದೇ ನವೆಂಬರ್‌ 18ರಿಂದ 22ರವರೆಗೆ ನವದೆಹಲಿಯಲ್ಲಿ ನಿಗದಿಯಾಗಿತ್ತು. ಆಗಸ್ಟ್‌ 5ರಂದು ಶೇಕ್‌ ಹಸೀನಾ ಸರ್ಕಾರ ಪತನಗೊಂಡ ಬಳಿಕ ಇದೇ ಮೊದಲ ಬಾರಿಗೆ ನಿಗದಿತ ಸಭೆಯೂ ರದ್ದುಗೊಂಡಿದೆ.

ಹೊಸ ದಿನಾಂಕ ನಿಗದಿ ಕುರಿತಂತೆ ಆದಷ್ಟು ಬೇಗ ನಿರ್ಧರಿಸಲಾಗುವುದು ಎಂದು ಬಾಂಗ್ಲಾದೇಶದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ADVERTISEMENT

ಎರಡು ದೇಶಗಳ ಗಡಿ ಭದ್ರತಾ ಪಡೆಗಳ ಡಿ.ಜಿ ಹಂತದ ಸಭೆಯಲ್ಲಿ ಗೃಹ ಇಲಾಖೆ, ವಿದೇಶಾಂಗ ಇಲಾಖೆ, ಮಾದಕ ವಸ್ತು ನಿರೋಧಕ ಘಟಕ ಹಾಗೂ ವಿವಿಧ ತನಿಖಾ ಸಂಸ್ಥೆಗಳ ಮುಖ್ಯಸ್ಥರು ಸಭೆ ಸೇರಿ ಗಡಿ ನಿಯಂತ್ರಣ ಕುರಿತು ಸಮಾಲೋಚನೆ ನಡೆಸುತ್ತಾರೆ. 

ಈ ಹಿಂದಿನ ಸಭೆಯು ಢಾಕಾದಲ್ಲಿ ನಡೆದಿತ್ತು.

ಭಾರತದ ಪೂರ್ವ ಭಾಗದಲ್ಲಿ ಬಾಂಗ್ಲಾದೇಶಕ್ಕೆ ಹೊಂದಿಕೊಂಡು 4,096 ಕಿ.ಮೀ ಗಡಿ ಹಂಚಿಕೊಂಡಿದ್ದು, ಬಿಎಸ್‌ಎಫ್‌ ರಕ್ಷಣೆಯ ಜವಾಬ್ದಾರಿ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.