ಲಂಡನ್: ಕಾಮನ್‌ವೆಲ್ತ್ ಒಕ್ಕೂಟಕ್ಕೆ ಮಾಲ್ಡೀವ್ಸ್ ಅನ್ನು ಪುನಃ ಸೇರ್ಪಡೆಗೊಳಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಭಾರತ ಆಗ್ರಹಿಸಿದೆ.
ಒಕ್ಕೂಟದ 70ನೇ ವರ್ಷಾಚರಣೆಗಾಗಿ ಲಂಡನ್‌ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರ ಮಟ್ಟದ ಸಭೆ ನಡೆಸಲಾಯಿತು. ಈ ವೇಳೆ ಮಾರ್ಲ್‌ಬರೊ ಹೌಸ್‌ನಲ್ಲಿ ನಡೆದ ಸಭೆ ಉದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಪ್ರಕ್ರಿಯೆ ತ್ವರಿತಗೊಳಿಸಲು ಕರೆ ನೀಡಿದರು.
53 ಸದಸ್ಯ ರಾಷ್ಟ್ರಗಳ ಕಾಮನ್‌ವೆಲ್ತ್ ಒಕ್ಕೂಟದ ಜತೆ ಬಾಂಧವ್ಯ ಹದಗೆಡಿಸಿಕೊಂಡಿದ್ದ ಮಾಲ್ಡೀವ್ಸ್ 2016ರಲ್ಲಿ ಒಕ್ಕೂಟದಿಂದ ಹೊರನಡೆದಿತ್ತು. ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿ ಅವರ ನೇತೃತ್ವದಲ್ಲಿ ಒಕ್ಕೂಟಕ್ಕೆ ಪುನರ್‌ಸೇರ್ಪಡೆಯಾಗಲು ಕಳೆದ ವರ್ಷ ಅರ್ಜಿ ಸಲ್ಲಿಸಿತ್ತು.
2018ರಲ್ಲಿ ಕಾಮನ್‌ವೆಲ್ತ್ ರಾಷ್ಟ್ರಗಳ ಮುಖಂಡರ ಸಭೆಯಲ್ಲಿ (ಚಾಗ್ಮ್) ಕೈಗೊಂಡಿದ್ದ ನಿರ್ಣಯಗಳು ಅನುಷ್ಠಾನಗೊಂಡ ಬಗ್ಗೆ ಈ ಸಭೆಯಲ್ಲಿ ಪರಿಶೀಲಿಸಲಾಯಿತು. ಜತೆಗೆ 2020ರ ಜೂನ್‌ನಲ್ಲಿ ರುವಾಂಡ ರಾಜಧಾನಿ ಕಿಗಾಲಿಯಲ್ಲಿ ನಡೆಯಲಿರುವ ಸಭೆಯ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಎಲ್ಲಾ ನಿರ್ಣಯಗಳನ್ನೂ ಜಾರಿಗೆ ತರುವಲ್ಲಿ ಭಾರತ ನಿರತವಾಗಿದ್ದು, ಮುಂದಿನ ಸಭೆಯೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಜೈಶಂಕರ್ ಇದೇ ವೇಳೆ ತಿಳಿಸಿದರು. ಸಚಿವರ ಮಟ್ಟದ ಸಭೆಯಲ್ಲಿ ಭಾಗವಹಿಸುವ ಮೂಲಕ, ಕಾಮನ್‌ವೆಲ್ತ್ ಒಕ್ಕೂಟಕ್ಕೆ ಭಾರತ ನೀಡುವ ಪ್ರಾಮುಖ್ಯತೆಯನ್ನು ಪುನಃ ದೃಢಪಡಿಸಲಾಗಿದೆ ಎಂದು ಸಹ ಹೇಳಿದರು.
ಸಭೆಯ ಬಳಿಕ, ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಜೆರೆಮಿ ಹಂಟ್ ಅವರ ಜತೆ ಜೈಶಂಕರ್ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.