ದೆಹಲಿ: ಭಾರತದ 'ಭದ್ರತಾ ಕಾರ್ಯತಂತ್ರದ ಹಿತಾಸಕ್ತಿ’ಗೆ ಹಾನಿಯುಂಟು ಮಾಡಲು ದ್ವೀಪ ರಾಷ್ಟ್ರ ಶ್ರೀಲಂಕಾವನ್ನು ‘ವೇದಿಕೆ’ಯನ್ನಾಗಿ ಬಳಸಿಕೊಳ್ಳಲು ಚೀನಾಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಮಹಿಂದಾ ರಾಜಪಕ್ಸೆ ನೇತೃತ್ವದ ಶ್ರೀಲಂಕಾ ಸರ್ಕಾರ ಭಾರತಕ್ಕೆ ಭರವಸೆ ನೀಡಿದೆ.
ಶ್ರೀಲಂಕಾದ ಹೊಸ ವಿದೇಶಾಂಗ ಕಾರ್ಯದರ್ಶಿ ಜಯನಾಥ್ ಕೊಲಂಬೇಜ್ ಅವರು ಕೊಲೊಂಬೊದ ‘ಡೈಲಿ ಮಿರರ್’ ಪತ್ರಿಕೆಗೆ ಸಂದರ್ಶನ ನೀಡಿದ್ದಾರೆ. ಅದರಲ್ಲಿ, ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಅವರ ಅಭಿಪ್ರಾಯಗಳನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. ‘ಭಾರತ ಮೊದಲು’ ಎಂಬ ನಿಲುವನ್ನು ಶ್ರೀಲಂಕಾ ಹೊಂದಿರುತ್ತದೆ. ಅಂದರೆ, ಶ್ರೀಲಂಕಾ ಭಾರತದ ಭದ್ರತಾ ಕಾರ್ಯತಂತ್ರದ ಹಿತಾಸಕ್ತಿಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ’ ಎಂದು ಅವರು ಹೇಳಿಕೊಂಡಿದ್ದಾರೆ. ಸಂದರ್ಶನವು ಬುಧವಾರ ಪ್ರಕಟಗೊಂಡಿದೆ.
ಶ್ರೀಲಂಕಾ ನೌಕಾಪಡೆಯ ಮಾಜಿ ಕಮಾಂಡರ್ ಆಗಿದ್ದ ಕೊಲಂಬೇಜ್, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೊದಲು ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಅವರ ಹೆಚ್ಚುವರಿ ಕಾರ್ಯದರ್ಶಿ (ವಿದೇಶಾಂಗ ವ್ಯವಹಾರ) ಆಗಿದ್ದರು.
'ಚೀನಾ ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿ ಮತ್ತು ಭಾರತ ಆರನೇ ಅತಿದೊಡ್ಡ ಆರ್ಥಿಕ ಶಕ್ತಿ. 2018 ರಲ್ಲಿ ಭಾರತವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಅಂದರೆ ನಾವು ಇಬ್ಬರು ಆರ್ಥಿಕ ಪ್ರಬಲರ ನಡುವೆ ಇದ್ದೇವೆ. ಬೇರೆ ದೇಶವೊಂದು ಇನ್ನೊಂದು ದೇಶಕ್ಕೆ, ಅದರಲ್ಲೂ ವಿಶೇಷವಾಗಿ ಭಾರತಕ್ಕೆ ಹಾನಿ ಮಾಡಲು ಶ್ರೀಲಂಕಾವನ್ನು ವೇದಿಕೆ ಮಾಡಿಕೊಳ್ಳುವುದಕ್ಕೆ ನಾವು ಬಿಟ್ಟಿಲ್ಲ, ಬಿಡಬಾರದು, ಬಿಡುವುದಿಲ್ಲ,’ ಎಂದು ಶ್ರೀಲಂಕಾದ ವಿದೇಶಾಂಗ ಕಾರ್ಯದರ್ಶಿ ಡೈಲಿ ಮಿರರ್ ಪತ್ರಿಕೆಗೆ ತಿಳಿಸಿದ್ದಾರೆ.
ಚೀನಾ ತನ್ನ ಭೌಗೋಳಿಕ-ಕಾರ್ಯತಂತ್ರದ ಪ್ರಭಾವವನ್ನು ವಿಸ್ತರಿಸುವ ಮೂಲಕ ಭಾರತವನ್ನು ಮಣಿಸಲು ಪ್ರಯತ್ನಗಳನ್ನು ನಡೆಸಿದೆ. ಹಿಂದೂ ಮಹಾಸಾಗರ ರಾಷ್ಟ್ರಗಳಲ್ಲಿ ಒಂದಾಗಿರುವ ಶ್ರೀಲಂಕಾದ ಮೂಲಕ ಈ ಪ್ರಯತ್ನಗಳನ್ನು ಚಾಲ್ತಿಯಲ್ಲಿಟ್ಟುಕೊಂಡಿದೆ. ಶ್ರೀಲಂಕಾದ ಹಂಬನ್‌ತೋಟ ಎಂಬಲ್ಲಿ ಬಂದರು ನಿರ್ಮಿಸಿಲು ಚೀನಾ ದ್ವೀಪ ರಾಷ್ಟ್ರಕ್ಕೆ ಆರ್ಥಿಕ ನೆರವು ನೀಡಿತು. ಆದರೆ, ಅದರ ಸಾಲ ತೀರಿಸಲಾಗದ ಶ್ರೀಲಂಕಾ ಸದ್ಯ ಬಂದರನ್ನು ಚೀನಾಕ್ಕೆ 99 ವರ್ಷಗಳ ಕಾಲ ಗುತ್ತಿಗೆಗೆ ನೀಡಬೇಕಾಯಿತು.
ರಾಜಪಕ್ಸೆ ಸಹೋದರರ ಪಕ್ಷವಾದ ‘ಶ್ರೀಲಂಕಾ ಪೊಡುಜಾನ ಪೆರಮುನಾ’ (ಎಸ್‌ಎಲ್‌ಪಿಪಿ) ಇತ್ತೀಚೆಗೆ ಸಂಸತ್ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಇದು, ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಕಬಂದಬಾಹುಗಳನ್ನು ವಿಸ್ತರಿಸಲು ಮತ್ತು ಅದರ ಮೂಲಕ ರಕ್ಷಣಾತ್ಮಕವಾಗಿ ಭಾರತವನ್ನು ಸಮೀಪಿಸಲು ಚೀನಾಕ್ಕೆ ಅನುಕೂಲವಾಗಲಿದೆ ಎಂದು ಹೇಳಲಾಗಿತ್ತು. ಈ ಊಹಾಪೋಹಗಳನ್ನು ನಿವಾರಿಸುವ ಪ್ರಯತ್ನವನ್ನು ಶ್ರೀಲಂಕಾ ಈ ಹೇಳಿಕೆಯ ಮೂಲಕ ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.