ಲಂಡನ್: ಬ್ರಿಟನ್ ಸಂಸತ್ತಿನಲ್ಲಿ ನಡೆದ ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಯಲ್ಲಿ ಕೆಲವು ಸಂಸದರು ಮಂಡಿಸಿರುವ ವಿಚಾರಗಳ ಬಗ್ಗೆ ಭಾರತ ತೀವ್ರ ಬೇಸರ ವ್ಯಕ್ತಪಡಿಸಿದೆ.
ಲಂಡನ್‌ನ ಸಂಸತ್‌ನಲ್ಲಿ ನಡೆದ ಈ ಚರ್ಚೆಯಲ್ಲಿ ಆಧಾರರಹಿತವಾದ ಸುಳ್ಳು ವಿಚಾರಗಳನ್ನು ಪ್ರತಿಪಾದಿಸಲಾಗಿದೆ ಎಂದು ಭಾರತ ಹೇಳಿದೆ.
ಬುಧವಾರ ಸಂಜೆ ಹೌಸ್ ಆಫ್ ಕಾಮನ್ಸ್‌ನ ವೆಸ್ಟ್ ಮಿನಿಸ್ಟರ್ ಹಾಲ್‌ನಲ್ಲಿ ಬ್ರಿಟಿಷ್ ಸಂಸದರು ಆಯೋಜಿಸಿದ್ದ ಈ ಚರ್ಚೆಗೆ ‘ಕಾಶ್ಮೀರದ ರಾಜಕೀಯ ಪರಿಸ್ಥಿತಿ‘ ಎಂಬ ಶೀರ್ಷಿಕೆ ಇಡಲಾಗಿದ್ದು, ಈ ಶೀರ್ಷಿಕೆಯೇ ಸಮಸ್ಯಾತ್ಮಕವಾಗಿದೆ ಎಂದು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಹೇಳಿದೆ.
ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿರುವ ವಾಸ್ತವ ಅಂಶಗಳನ್ನು ಕೈಬಿಟ್ಟು ಸುಳ್ಳು ವಿಚಾರಗಳನ್ನು ಬ್ರಿಟನ್ ಸಂಸದರು ಚರ್ಚೆಯಲ್ಲಿ ಪ್ರತಿಪಾದಿಸಿದ್ದಾರೆ ಎಂದು ಹೈ ಕಮಿಷನ್ ಆಕ್ಷೇಪಿಸಿದೆ.
ಚರ್ಚೆಯ ಶೀರ್ಷಿಕೆ ಬಗ್ಗೆ ಮಾತನಾಡಿರುವ ಭಾರತೀಯ ಹೈ ಕಮಿಷನ್, ‘ಭಾರತದ ಅವಿಭಾಜ್ಯ ಅಂಗವಾಗಿರುವ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಳಿತ ಪ್ರದೇಶ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಹಿಂದಿನ ಕಾಶ್ಮೀರ ರಾಜಪ್ರಭುತ್ವ ಕಾನೂನುಬದ್ಧವಾಗಿ ಅಂಗೀಕರಿಸಲ್ಪಟ್ಟಿರುವುದು) ನಡುವಿನ ವ್ಯತ್ಯಾಸವನ್ನು ಮೊದಲು ಅರಿಯಬೇಕು‘ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.