ವಿಶ್ವಸಂಸ್ಥೆ: ಧ್ವನಿಮತದ ಮೂಲಕ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯ ಮೂರು ಸಂಸ್ಥೆಗಳ ಕಾರ್ಯಕಾರಿ ಸಮಿತಿಗೆ ಭಾರತವನ್ನು ಸದಸ್ಯ ರಾಷ್ಟ್ರವನ್ನಾಗಿ ಆಯ್ಕೆ ಮಾಡಲಾಗಿದೆ.
ಜನವರಿ 1,2022ರಿಂದ ಆರಂಭವಾಗಲಿರುವ ವಿಶ್ವಸಂಸ್ಥೆಯ, ಅಪರಾಧ ತಡೆಗಟ್ಟವಿಕೆ ಮತ್ತು ಅಪರಾಧ ನ್ಯಾಯ ಆಯೋಗ, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಮತ್ತು ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್‌ಪಿ)ಗಳ ಕಾರ್ಯಕಾರಿ ಸಮಿತಿಗೆ ಭಾರತವನ್ನು ಆಯ್ಕೆ ಮಾಡಲಾಗಿದೆ.
ಅಪರಾಧ ತಡೆಗಟ್ಟುವಿಕೆ ಮತ್ತು ಅಪರಾಧ ನ್ಯಾಯ ಆಯೋಗಕ್ಕೆ ಆಸ್ಟ್ರಿಯಾ, ಬಹ್ರೇನ್, ಬೆಲರಸ್, ಬಲ್ಗೇರಿಯಾ, ಕೆನಡಾ, ಫ್ರಾನ್ಸ್, ಘಾನಾ, ಲಿಬಿಯಾ, ಪಾಕಿಸ್ತಾನ, ಕತಾನರ್, ಥಾಯ್ಲೆಂಡ್ ಟೊಗೊ ಮತ್ತು ಅಮೆರಿಕ ರಾಷ್ಟ್ರಗಳನ್ನೂ ಧ್ವನಿ ಮತದ ಮೂಲಕ ಆಯ್ಕೆ ಮಾಡಿದ್ದರೆ, ಬ್ರೆಜಿಲ್, ಡೊಮಿನಿಕನ್ ಗಣರಾಜ್ಯ, ಪರಗ್ವೆ, ಚಿಲಿ, ಕ್ಯೂಬಾ ರಾಷ್ಟ್ರಗಳನ್ನು ಗೌಪ್ಯ ಮತದಾನದ ಮೂಲಕ ಆಯ್ಕೆ ಮಾಡಲಾಗಿದೆ.
ವಿಶ್ವ ಸಂಸ್ಥೆಯ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ (ವಿಶ್ವಸಂಸ್ಥೆಯ ಮಹಿಳೆ) ವಿಭಾಗದ ಕಾರ್ಯನಿರ್ವಾಹಕ ಮಂಡಳಿಗೆ ಭಾರತದೊಂದಿಗೆ ಆಫ್ಗಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಕ್ಯಾಮರೂನ್, ಕೊಲಂಬಿಯಾ, ಡೊಮಿನಿಕನ್ ರಿಪಬ್ಲಿಕ್, ಈಜಿಪ್ಟ್, ಗ್ಯಾಂಬಿಯಾ, ಗಯಾನಾ, ಕೀನ್ಯಾ, ಮೊನಾಕೊ, ಪೋಲೆಂಡ್, ದಕ್ಷಿಣ ಆಫ್ರಿಕಾ, ಥೈಲ್ಯಾಂಡ್, ತುರ್ಕಮೆನಿಸ್ತಾನ್ ಮತ್ತು ಉಕ್ರೇನ್ ದೇಶಗಳನ್ನೂ ಧ್ವನಿ ಮತದ ಮೂಲಕ ಆಯ್ಕೆ ಮಾಡಲಾಗಿದೆ.
ವಿಶ್ವ ಆಹಾರ ಕಾರ್ಯಕ್ರಮದ ಕಾರ್ಯಕಾರಿ ಸಮಿತಿಗೆ ಭಾರತದೊಂದಿಗೆ ಫ್ರಾನ್ಸ್, ಘಾನಾ, ಕೊರಿಯಾ ಗಣರಾಜ್ಯ, ರಷ್ಯಾ ಮತ್ತು ಸ್ವೀಡನ್‌ಗಳನ್ನು ಆಯ್ಕೆ ಮಾಡಲಾಗಿದೆ. ಈ ಎಲ್ಲ ಮಂಡಳಿಗಳ ಸಮಿತಿಗಳು ಜನವರಿ 1, 2022 ರಿಂದ ಕಾರ್ಯಾರಂಭ ಮಾಡಲಿದ್ದು, ಮೂರು ವರ್ಷಗಳವರೆಗೆ ಮುಂದುವರಿಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.