ನವದೆಹಲಿ: ಭಾರತದ ರಕ್ಷಣಾ ಪಡೆಗಳು, ವಿದೇಶಾಂಗ ನೀತಿ ಮತ್ತು ಗುಪ್ತಚರ ವಿಭಾಗದ ಹಿರಿಯ ಅಧಿಕಾರಿಗಳು ಸೋಮವಾರ ಸಭೆ ಸೇರಿ ಅಫ್ಗಾನಿಸ್ತಾನ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.
ಭಾರತದ ರಾಯಭಾರ ಕಚೇರಿ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಸೇರಿ ಸುಮಾರು 200 ಭಾರತೀಯರು ಈಗಲೂ ಅಫ್ಗಾನಿಸ್ತಾನದಲ್ಲಿ ಇದ್ದಾರೆ. ಅವರನ್ನು ಅಲ್ಲಿಂದ ಕರೆತರುವುದು ಭಾರತದ ಆದ್ಯತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಬೂಲ್ ವಿಮಾನ ನಿಲ್ಧಾಣದಲ್ಲಿನ ಗೊಂದಲದಿಂದಾಗಿ ತೆರವು ಕಾರ್ಯಾಚರಣೆ ನಡೆದಿಲ್ಲ. ಸಿ–17 ಗ್ಲೋಬ್‌ಮಾಸ್ಟರ್ ಸೇನಾ ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಭಾರತದ ರಾಯಭಾರ ಕಚೇರಿ ಮತ್ತು ಇತರೆಡೆಗಳಲ್ಲಿ ಇರುವ ಭಾರತೀಯರನ್ನು
ಕಾಬೂಲ್ ವಿಮಾನ ನಿಲ್ದಾಣಕ್ಕೆ ಕರೆತರುವುದು ಕೂಡ ಈಗ ಅಪಾಯಕಾರಿಯಾಗಿದೆ ಎಂದು ಹೇಳಲಾಗಿದೆ.
ಹಿಂದೂ, ಸಿಖ್ ಸಮುದಾಯದ ನೂರಾರು ಮಂದಿ, ಭಾರತದ ವೀಸಾಕ್ಕೆ ಅರ್ಜಿ ಸಲ್ಲಿಸಿರುವ ಹಲವು ಮಂದಿಯನ್ನೂ ಭಾರತಕ್ಕೆ ಕರೆ ತರುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.
ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ನ ಅತಿ ವೇಗದ ಕಾರ್ಯಾಚರಣೆಯು ಭಾರತ ಸೇರಿ ಹಲವು ದೇಶಗಳಿಗೆ ಅಚ್ಚರಿ ಉಂಟು ಮಾಡಿದೆ. ‘ನಿಜವಾಗಿಯೂ ನಾವು ಈ ಪರಿಸ್ಥಿತಿಯನ್ನು ನಿರೀಕ್ಷಿಸಿರಲಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಲ್ಲಿ 500ಕ್ಕೂ ಹೆಚ್ಚು ಯೋಜನೆಗಳಲ್ಲಿ ಭಾರತ ತೊಡಗಿಸಿಕೊಂಡಿದೆ. ಸುಮಾರು ₹22 ಸಾವಿರ ಕೋಟಿಗೂ ಹೆಚ್ಚು ಮೊತ್ತವನ್ನು ಭಾರತವು ಅಲ್ಲಿ ಹೂಡಿಕೆ ಮಾಡಿದೆ.
ಸನ್ನದ್ಧ ಸ್ಥಿತಿ:
ಅಫ್ಗಾನಿಸ್ತಾನದ ಬೆಳವಣಿಗೆ ಮೇಲೆ ಕಣ್ಣಿರಿಸಲಾಗಿದೆ. ಯಾವುದೇ ಪರಿಸ್ಥಿತಿ ಎದುರಿಸುವ ಸನ್ನದ್ಧತೆ ಇದೆ ಎಂದು ಗಡಿ ರಕ್ಷಣಾ ಪಡೆಯ (ಬಿಎಸ್‌ಎಫ್) ಮಹಾ ನಿರ್ದೇಶಕ ಎಸ್.ಎಸ್. ದೇಸ್ವಾಲ್ ಅವರು ಸೋಮವಾರ ಹೇಳಿದ್ದಾರೆ.ಅಫ್ಗಾನಿಸ್ತಾನದ ವಿದ್ಯಮಾನವು ಆ ದೇಶದ ಆಂತರಿಕ ವಿಚಾರ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಬಿಎಸ್‌ಎಫ್‌ನ ನೂರು ಯೋಧರ ‘ಸ್ವಾತಂತ್ರ್ಯ ಸೈಕಲ್ ಜಾಥಾ’ಕ್ಕೆ ಚಾಲನೆ ಕೊಡಲು ಅವರು ಜಮ್ಮುವಿಗೆ ಭೇಟಿಕೊಟ್ಟಿದ್ದರು.
ಏಳುಸಾವು:
ಕಾಬೂಲ್‌ನಲ್ಲಿ ಸೋಮವಾರ ಏಳು ಜನರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕ ಸೇನಾ ವಿಮಾನದ ಮೇಲೆ ಕೆಲವರು ಹತ್ತಿದ್ದರು. ವಿಮಾನ ಹಾರಿದಾಗ ಅವರಲ್ಲಿ ಕೆಲವರು ಕೆಲ ಬಿದ್ದು ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.