ವಾಷಿಂಗ್ಟನ್:1990ರ ಬಳಿಕ ಈವರೆಗೆ ಭಾರತದ ಬಡತನ ಪ್ರಮಾಣದಲ್ಲಿ ಅರ್ಧದಷ್ಟು ಇಳಿಕೆಯಾಗಿದೆ. ಕಳೆದ 15 ವರ್ಷಗಳಲ್ಲಿ ಭಾರತವು ಶೇ 7ಕ್ಕೂ ಹೆಚ್ಚಿನ ವಾರ್ಷಿಕ ಬೆಳವಣಿಗೆ ದರ ದಾಖಲಿಸಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಬಡತನವನ್ನು ತೊಡೆದುಹಾಕುವ ಪ್ರಯತ್ನವೂ ಸೇರಿದಂತೆಜಾಗತಿಕ ಅಭಿವೃದ್ಧಿ ವಿಚಾರದಲ್ಲಿ ಭಾರತವು ನಿರ್ಣಾಯಕ ಪಾತ್ರವಹಿಸುತ್ತಿದೆ. ಹವಾಮಾನ ಬದಲಾವಣೆ ನಿಯಂತ್ರಣದಂತಹ ಜಾಗತಿಕ ವಿಚಾರಗಳಲ್ಲಿ ಪ್ರಭಾವಿ ನಾಯಕತ್ವ ವಹಿಸಿಕೊಳ್ಳುತ್ತಿದೆ ಎಂದುವಿಶ್ವಬ್ಯಾಂಕ್ ಹೇಳಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಜತೆಗಿನ ವಾರ್ಷಿಕ ಸಭೆ ಸಮೀಪಿಸುತ್ತಿರುವಂತೆಯೇ ವಿಶ್ವಬ್ಯಾಂಕ್ ಈ ಹೇಳಿಕೆ ನೀಡಿದೆ.
ಬೆಳವಣಿಗೆ ದರ ಹೀಗೆಯೇ ಮುಂದುವರಿಯುವ ನಿರೀಕ್ಷೆ ಇದೆ. ದಶಕದಲ್ಲಿ ಭಾರತವು ತೀವ್ರ ಬಡತನವನ್ನು ತೊಡೆದುಹಾಕಲಿದೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ. ಜತೆಗೇ, ದೇಶದ ಅಬಿವೃದ್ಧಿ ಪಥದ ಮುಂದೆ ಸಾಕಷ್ಟು ಸವಾಲುಗಳು ಇವೆ ಎಂದೂ ಹೇಳಿದೆ.
ಬೆಳವಣಿಗೆಯ ಹಾದಿಯಲ್ಲಿರುವ ಭಾರತವು ಸಂಪನ್ಮೂಲ ಲಭ್ಯತೆ ಮತ್ತು ಬೃಹತ್ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಇನ್ನಷ್ಟು ಸಂಪನ್ಮೂಲ ದಕ್ಷತೆ ಸಾಧಿಸಬೇಕಿದೆ ಎಂದು ವಿಶ್ವಬ್ಯಾಂಕ್ ಸಲಹೆ ನೀಡಿದೆ.
ಇದನ್ನೂ ಓದಿ:ಹಣದ ಒಳಹರಿವು ಹೆಚ್ಚಳ -ಮುಂಚೂಣಿಯಲ್ಲಿ ಭಾರತ
ನಗರ ಪ್ರದೇಶಗಳಲ್ಲಿ ಭೂಮಿಯನ್ನು ಹೆಚ್ಚು ಉತ್ಪಾದಕವಾಗಿ ಬಳಸಿಕೊಳ್ಳಬೇಕಿದೆ. ಹಾಗೆಯೇ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ಹೆಚ್ಚಿಸುವತ್ತ ಗಮನಹರಿಸಬೇಕಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ವೇಗವಾಗಿ ಪ್ರಗತಿ ಹೊಂದುತ್ತಿರುವ ಭಾರತದ ಆರ್ಥಿಕತೆಗೆ ಮೂಲಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಅಗತ್ಯವಿದೆ ಎಂದಿರುವ ವಿಶ್ವಬ್ಯಾಂಕ್, ಇದು 2030ರ ವೇಳೆಗೆ ಜಿಡಿಪಿಯ ಶೇ 8.8ರಷ್ಟಾಗಲಿದೆ ಎಂದೂ ಅಂದಾಜಿಸಿದೆ.
ಹೆಚ್ಚು ಉದ್ಯೋಗ ಸೃಷ್ಟಿಸುವ ಅಗತ್ಯವಿದೆ. ಅಂದಾಜು 1.3 ಕೋಟಿ ಜನ ಪ್ರತಿ ವರ್ಷ ಉದ್ಯೋಗ ಪಡೆಯುವ ಅರ್ಹತೆ ಪಡೆಯುತ್ತಿದ್ದಾರೆ. ಆದರೆ, ವಾರ್ಷಿಕವಾಗಿ ಕೇವಲ 30 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದುವಿಶ್ವಬ್ಯಾಂಕ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.