ನವದೆಹಲಿ: 17 ಭಾರತೀಯ ಸಿಬ್ಬಂದಿ ಇರುವ ಇಸ್ರೇಲ್ ಮೂಲದ ಸರಕು ಸಾಗಣೆ ಹಡಗನ್ನು ಇರಾನ್ ಸೇನೆ ವಶಪಡಿಸಿಕೊಂಡಿದ್ದರಿಂದ ಉಭಯ ರಾಷ್ಟ್ರಗಳ ನಡುವೆ ಉದ್ವಿಘ್ನತೆ ಹೆಚ್ಚಾಗಿದೆ. ಭಾರತೀಯರ ಸುರಕ್ಷಿತ ಬಿಡುಗಡೆಗೆ ಇರಾನ್‌ನೊಂದಿಗೆ ಸಂಪರ್ಕದಲ್ಲಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ರಾಜತಾಂತ್ರಿಕ ಮಾರ್ಗದ ಮೂಲಕ ಭಾರತವು ಇರಾನ್ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಭಾರತೀಯ ನಾಗರಿಕರ ಸುರಕ್ಷತೆ ಮತ್ತು ಬಿಡುಗಡೆ ಬಗ್ಗೆ ಚರ್ಚೆ ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
12 ದಿನಗಳ ಹಿಂದೆ ಸಿರಿಯಾದಲ್ಲಿ ನಡೆದ ಇರಾನ್ ರಾಯಭಾರ ಕಚೇರಿ ಮೇಲಿನ ದಾಳಿಗೆ ಪ್ರತಿಕಾರವಾಗಿ ಇಸ್ರೇಲ್ ನೆಲೆ ಮೇಲೆ ಇರಾನ್ ದಾಳಿ ನಡೆಸುವ ಭೀತಿ ಹೆಚ್ಚಾಗಿದ್ದು, ಇದರ ಭಾಗವಾಗಿ ತನ್ನ ಜಲಮಾರ್ಗದ ಮೂಲಕ ಸಾಗುವ ಹಡಗುಗಳನ್ನು ತನ್ನ ವಶಕ್ಕೆ ಪಡೆದಿದೆ ಎಂದೆನ್ನಲಾಗಿದೆ.
‘ಎಂಎಸ್‌ಸಿ ಏರಿಸ್ ಎಂಬ ಸರಕು ಸಾಗಣೆ ಹಡಗು ಹಾರ್ಮುಝ್‌ನ ಸ್ಟ್ರೈಟ್ ಬಳಿ ಸಾಗುತ್ತಿದ್ದ ಹಡಗನ್ನು ಇರಾನ್ ತನ್ನ ವಶಕ್ಕೆ ಪಡೆದಿದೆ. ಇದರಲ್ಲಿ ಒಟ್ಟು 17 ಭಾರತೀಯರು ಇದ್ದಾರೆ. ದೆಹಲಿಯು ಈ ಕುರಿತು ಟೆಹ್ರಾನ್ ಸಂಪರ್ಕದಲ್ಲಿದೆ. ಸಿಬ್ಬಂದಿಯ ಸುರಕ್ಷತೆಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.