ವಾಷಿಂಗ್ಟನ್ (ಪಿಟಿಐ): ಭಾರತದ ಪ್ರಜಾಪ್ರಭುತ್ವವು ಅತ್ಯಂತ ಪ್ರಖರವಾದುದು, ಯಾರು ಬೇಕಾದರೂ ದೆಹಲಿಗೆ ಹೋಗಿ ಇದನ್ನು ಖಾತ್ರಿಪಡಿಸಿಕೊಳ್ಳಬಹುದು ಎಂದು ಶ್ವೇತಭವನ ಮಂಗಳವಾರ ಹೇಳಿದೆ.
ಅಮೆರಿಕವು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ತನಗಿದ್ದ ಕಳವಳಗಳನ್ನು ತಳ್ಳಿಹಾಕುವಂತಹ ಹೇಳಿಕೆ ನೀಡಿದ್ದು,
‘ಅತ್ಯಂತ ಚಲನಶೀಲ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಭಾರತವು ಹಲವು ಹಂತಗಳಲ್ಲಿ ಅಮೆರಿಕಕ್ಕೆ ಪ್ರಮುಖ ಪಾಲುದಾರ ರಾಷ್ಟ್ರವಾಗಿದೆ. ಪ್ರಧಾನಿ ಮೋದಿ ಅವರ ಭೇಟಿಯ ವೇಳೆ ಉಭಯ ರಾಷ್ಟ್ರಗಳ ಪಾಲುದಾರಿಕೆ ಮತ್ತು ಸ್ನೇಹವನ್ನು ಮತ್ತಷ್ಟು ನಿಕಟವಾಗಿಸಲು ಅಧ್ಯಕ್ಷ ಜೋ ಬೈಡನ್ ತುಂಬಾ ಉತ್ಸುಕರಾಗಿದ್ದಾರೆ’ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ಸಮನ್ವಯಕಾರ (ಕಾರ್ಯತಂತ್ರ ಸಂವಹನ) ಜಾನ್ ಕಿರ್ಬಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ ಕೊನೆಯಲ್ಲಿ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಇದರ ಬೆನ್ನಲ್ಲೇ ಶ್ವೇತಭವನದಿಂದ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಮೆಚ್ಚುಗೆಯ ಹೇಳಿಕೆ ಹೊರಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.