ಒಟ್ಟಾವ : ‘ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟ್‌ಗಳ ಪಾತ್ರ ಇದೆ ಎಂದು ಆರೋಪಿಸಿದಾಗ ನನ್ನಲ್ಲಿ ಯಾವುದೇ ‘ಬಲವಾದ ಸಾಕ್ಷಿ ಪುರಾವೆಗಳು’ ಇರಲಿಲ್ಲ’ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಬುಧವಾರ ಒಪ್ಪಿಕೊಂಡಿದ್ದಾರೆ. ಆದರೆ ‘ಗುಪ್ತಚರ ಮಾಹಿತಿ ಮಾತ್ರ ಇತ್ತು’ ಎಂದು ಅವರು ಹೇಳಿದ್ದಾರೆ.
ಚುನಾವಣಾ ಪ್ರಕ್ರಿಯೆಗಳಲ್ಲಿ ಹಾಗೂ ಪ್ರಜಾತಾಂತ್ರಿಕ ಸಂಸ್ಥೆಗಳಲ್ಲಿ ವಿದೇಶಿ ಶಕ್ತಿಗಳ ಹಸ್ತಕ್ಷೇಪ ಕುರಿತ ವಿಚಾರಣೆಗೆ ಹಾಜರಾದ ಟ್ರುಡೊ, ‘ಭಾರತದ ರಾಜತಾಂತ್ರಿಕರು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕುರಿತು ಭಿನ್ನಾಭಿಪ್ರಾಯ ಹೊಂದಿರುವ ಕೆನಡಾ ಪ್ರಜೆಗಳ ಬಗ್ಗೆ ಮಾಹಿತಿ ಸಂಗ್ರಹಿಸು ತ್ತಿದ್ದಾರೆ, ಆ ಮಾಹಿತಿಯನ್ನು ಅವರು ಭಾರತ ಸರ್ಕಾರದ ಅತ್ಯುನ್ನತ ಹಂತಗಳಲ್ಲಿ ಇರುವವರಿಗೆ
ಹಾಗೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಂತಹ ಕ್ರಿಮಿನಲ್ ಸಂಘಟನೆಗಳಿಗೆ ರವಾನಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಕೆನಡಾದ ಸಂಸ್ಥೆಗಳಿಂದ ಹಾಗೂ ಬಹುಶಃ ಫೈವ್ ಐಯ್ಸ್ ಮಿತ್ರ ರಾಷ್ಟ್ರಗಳಿಂದ (ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ ಮತ್ತು ನ್ಯೂಜಿಲೆಂಡ್) ದೊರೆತ ಗುಪ್ತಚರ ಮಾಹಿತಿಯನ್ನು ನನಗೆ ನೀಡಲಾಯಿತು. ಅದು, ಇದರಲ್ಲಿ ಭಾರತ ಭಾಗಿಯಾಗಿರುವುದನ್ನು ಬಹಳಷ್ಟು ಸ್ಪಷ್ಟಪಡಿಸಿತು... ಭಾರತ ಸರ್ಕಾರದ ಏಜೆಂಟ್‌ಗಳು ಕೆನಡಾದ ನೆಲದಲ್ಲಿ ಕೆನಡಾದ ಪ್ರಜೆಗಳ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ’ ಎಂದು ಟ್ರುಡೊ ಹೇಳಿದ್ದಾರೆ.
ಇದನ್ನು ತಮ್ಮ ನೇತೃತ್ವದ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕಾಗಿತ್ತು ಎಂದು ಅವರು ಹೇಳಿದ್ದಾರೆ. ‘ಭಾರತವು ಇದನ್ನು ನಿಜಕ್ಕೂ ಮಾಡಿದೆ ಎಂದು ನಂಬಲು ನಮ್ಮಲ್ಲಿ ಕಾರಣಗಳಿದ್ದವು’ ಎಂದು ತಿಳಿಸಿದ್ದಾರೆ. ತಮ್ಮ ನೇತೃತ್ವದ ಸರ್ಕಾರವು ತಕ್ಷಣವೇ ಭಾರತ ಸರ್ಕಾರದ ಜೊತೆ ಸಮಾಲೋಚನೆ ನಡೆಸಿ, ಈ ವಿಚಾರದಲ್ಲಿ ಉತ್ತರದಾಯಿತ್ವ ಇರುವಂತೆ ಮಾಡಲು ಒಟ್ಟಾಗಿ ಕೆಲಸ ಮಾಡುವ ಮಾರ್ಗ ಅನುಸರಿಸಿತು ಎಂದಿದ್ದಾರೆ.
ಕಳೆದ ಸೆಪ್ಟೆಂಬರ್‌ನಲ್ಲಿ ಭಾರತವು ಆತಿಥ್ಯ ವಹಿಸಿದ್ದ ಜಿ–20 ಶೃಂಗಸಭೆಯನ್ನು ಉಲ್ಲೇಖಿಸಿದ ಟ್ರುಡೊ, ಆ ಸಭೆಯು ಭಾರತದ ಪಾಲಿಗೆ ವಿಶೇಷ ಸಂದರ್ಭವಾಗಿತ್ತು. ಈ ಆರೋಪಗಳನ್ನು ಆಗ ಬಹಿರಂಗಪಡಿಸಿ ಭಾರತದ ಪಾಲಿಗೆ ಆ ಶೃಂಗಸಭೆಯು ತೀರಾ ಅಹಿತಕರವಾಗಿ ಪರಿಣಮಿಸುವಂತೆ ಮಾಡುವ ಅವಕಾಶ ಕೆನಡಾ ದೇಶಕ್ಕೆ ಇತ್ತು ಎಂದು ಅವರು ಹೇಳಿದ್ದಾರೆ.
‘ಆದರೆ ಹಾಗೆ ಮಾಡದೆ ಇರಲು ನಾವು ತೀರ್ಮಾನಿಸಿದೆವು. ಆದರೆ ಸಾಕ್ಷ್ಯ ಒದಗಿಸಲು ಭಾರತದ ಅಧಿಕಾರಿಗಳು ಒತ್ತಾಯಿಸಿದರು. ‘ಆಗ ನಮ್ಮಲ್ಲಿ ಇದ್ದಿದ್ದು ಗುಪ್ತಚರ ಮಾಹಿತಿ, ಬಲವಾದ ಪುರಾವೆ ಇರಲಿಲ್ಲ. ಹೀಗಾಗಿ ಜೊತೆಯಾಗಿ ಕೆಲಸ ಮಾಡೋಣ. ನಿಮ್ಮ ಭದ್ರತಾ ಸಂಸ್ಥೆಗಳ ಬಳಸಿ ಅರಸೋಣ. ನಮಗೆ ಸಾಕ್ಷ್ಯ ಸಿಗಬಹುದು ಎಂದಿದ್ದೆವು’ ಎಂದು ಟ್ರುಡೊ ಹೇಳಿದ್ದಾರೆ.
‘ಮೋದಿಗೆ ವಿವರಿಸಲು ಯತ್ನಿಸಿದ್ದೆ’
ಜಿ–20 ಶೃಂಗಸಭೆಯ ನಂತರ ತಾವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ, ಈ ವಿಚಾರವನ್ನು ತಿಳಿಸಿದಾಗ, ‘ಅವರ ಕಡೆಯಿಂದ ಮಾಮೂಲಿನ ಪ್ರತಿಕ್ರಿಯೆ ಬಂತು. ಅಂದರೆ, ಭಾರತ ಸರ್ಕಾರದ ವಿರುದ್ಧ ಮಾತನಾಡುವ ವ್ಯಕ್ತಿಗಳು ಕೆನಡಾದಲ್ಲಿ ಇದ್ದಾರೆ, ಅವರನ್ನು ಬಂಧಿಸಬೇಕು ಎಂಬುದು ತಮ್ಮ ಬಯಕೆ ಎಂದು ಅವರು (ಮೋದಿ) ಹೇಳಿದರು’ ಎಂದು ಜಸ್ಟಿನ್ ಟ್ರುಡೊ ತಿಳಿಸಿದ್ದಾರೆ.
ಕೆನಡಾದಲ್ಲಿ ಬೇರೆ ದೇಶಗಳ ಸರ್ಕಾರಗಳನ್ನು ಟೀಕಿಸುವ ಹಾಗೂ ಕೆನಡಾದ ಸರ್ಕಾರವನ್ನು ಟೀಕಿಸುವ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂಬುದನ್ನು ಮೋದಿ ಅವರಿಗೆ ವಿವರಿಸಲು ತಾವು ಯತ್ನಿಸಿದ್ದಾಗಿಯೂ ಟ್ರುಡೊ ಹೇಳಿದ್ದಾರೆ.
ಭಾರತ ಸಹಕರಿಸುತ್ತಿಲ್ಲ: ಅಮೆರಿಕ
ವಾಷಿಂಗ್ಟನ್/ ಲಂಡನ್: ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ತನಿಖೆಗೆ ಭಾರತವು ಕೆನಡಾಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಅಮೆರಿಕ ಆರೋಪಿಸಿದೆ. ಇದರ ಬೆನ್ನಲ್ಲೆ ಪ್ರಕರಣದ ತನಿಖೆಗೆ ಭಾರತ ಸಂಪೂರ್ಣ ಸಹಕಾರ ನೀಡುವ ಅಗತ್ಯವಿದೆ ಎಂದು ಬ್ರಿಟನ್ ಕೂಡ ಹೇಳಿದೆ.
‘ಕೆನಡಾ ಮಾಡಿರುವ ಆರೋಪಗಳು ಗಂಭೀರ ವಾಗಿವೆ. ಭಾರತ ಇದನ್ನು ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಸಹಕಾರ ನೀಡಬೇಕೆಂದು ನಾವು ಬಯಸುತ್ತೇವೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಮಂಗಳವಾರ ತಿಳಿಸಿದ್ದಾರೆ.
‘ಭಾರತ–ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧದ ಬಗ್ಗೆ ನಾವು ಪ್ರತಿಕ್ರಿಯೆ ನೀಡಲ್ಲ. ಆದರೆ, ಕೆನಡಾ ಮಾಡಿರುವ ಆರೋಪಗಳನ್ನು ಭಾರತ ಗಂಭೀರವಾಗಿ ಪರಿಗಣಿಸಬೇಕು’ ಎಂದು ಮಿಲ್ಲರ್ ಹೇಳಿದ್ದಾರೆ.
ಕೆನಡಾದಲ್ಲಿನ ಸ್ವತಂತ್ರ ತನಿಖೆಗಳಲ್ಲಿ ವಿವರಿಸಿರುವ ಗಂಭೀರ ಬೆಳವಣಿಗೆಗಳ ಬಗ್ಗೆ ನಾವು ನಮ್ಮ ಕೆನಡಾದ ಪಾಲುದಾರರೊಂದಿಗೆ ಸಂಪರ್ಕದಲ್ಲಿದ್ದೇವೆ–ಎಫ್‌ಸಿಡಿಒ ವಕ್ತಾರರು
ಕೆನಡಾ ಭಯೋತ್ಪಾದಕ ಗುಂಪುಗಳಿಗೆ ಆಶ್ರಯ ನೀಡುತ್ತಿದೆ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ– ಭಾರತ
‘ಸಿಖ್ ಸಮುದಾಯ ದನಿ ಎತ್ತಲಿ ’
ಕೆನಡಾದಲ್ಲಿ ಭಾರತ ಸರ್ಕಾರ ನಡೆಸಿದೆ ಎನ್ನಲಾದ ಹಿಂಸಾ ಚಾರಕ್ಕೆ ಸಂಬಂಧಿಸಿದ ಆರೋಪಗಳ ತನಿಖೆ ನಡೆಯುತ್ತಿರುವಾಗ, ಇಲ್ಲಿನ ಸಿಖ್ ಸಮುದಾಯವು ಈ ಬಗ್ಗೆ ದನಿ ಎತ್ತಬೇಕು ಎಂದು ರಾಯಲ್ ಕೆನಡಿಯನ್ ಮೌಂಟೆ ಡ್ ಪೊಲೀಸ್ (ಆರ್‌ಸಿಎಂಪಿ) ಕಮಿಷನರ್ ಮೈಕ್ ಡುಹೆಮ್ ಒತ್ತಾಯಿಸಿದ್ದಾರೆ.
ಮಾಹಿತಿ ಹೊಂದಿರುವವರು ಇದೀಗ ಮುಂದೆ ಬರಬೇಕು ಎಂದು ಮೈಕ್ ಅವರು ರೇಡಿಯೊ ಕೆನಡಾಕ್ಕೆ ಮಂಗಳವಾರ ನೀಡಿದ ಸಂದರ್ಶನದಲ್ಲಿ ಹೇಳಿರುವುದಾಗಿ ಕೆನಡಾದ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.
‘ಜನರು ಮುಂದೆ ಬಂದರೆ ನಾವು ಅವರಿಗೆ ಸಹಾಯ ಮಾಡಬಹುದು. ಮುಂದೆ ಬರುವಂತೆ ನಾನು ಅವರನ್ನು ಕೇಳಿಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ. ಕೆನಡಾದಲ್ಲಿ ನರಹತ್ಯೆಗಳು ಸೇರಿ ವ್ಯಾಪಕ ಹಿಂಸಾಚಾರದ ಕೃತ್ಯಗಳಲ್ಲಿ ಭಾರತ ಸರ್ಕಾರದ ‘ಏಜೆಂಟರು’ ಪಾತ್ರವಹಿಸಿದ್ದಾರೆ ಎಂದು ಡುಹೆಮ್ ಸೋಮವಾರ ಆರೋಪಿಸಿದ್ದರು.
‘ಉಭಯತ್ರರು ಮುಕ್ತ ಮಾತುಕತೆ ನಡೆಸಲಿ’
ಭಾರತ-ಕೆನಡಾ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಿರುವ ಮಧ್ಯೆ, ಒಂಟಾರಿಯೊ ಮೂಲದ ಸಂಸ್ಥೆಯೊಂದು ಈ ವಿಷಯದಲ್ಲಿ ಉಭಯ ರಾಷ್ಟ್ರಗಳು ಮುಕ್ತ ಮಾತುಕತೆ ನಡೆಸುವ ಅಗತ್ಯವನ್ನು ಒತ್ತಿ ಹೇಳಿದೆ.
ಕೆನಡಾದ ಭದ್ರತೆ, ಸಮೃದ್ಧಿ ಮತ್ತು ಜಾಗತಿಕ ನಿಲುವಿನ ದೃಷ್ಟಿಯಲ್ಲಿ ಬಲವಾದ ದ್ವಿಪಕ್ಷೀಯ ಬಾಂಧವ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಇದಕ್ಕಾಗಿ ಉಭಯ ರಾಷ್ಟ್ರಗಳು ಶಾಂತಿಯುತ ನಿರ್ಣಯಗಳ ಕಡೆಗೆ ಕೆಲಸ ಮಾಡುವುದು ನಿರ್ಣಾಯಕವಾಗಿದೆ ಎಂದು ‘ದಿ ಕೆನಡಾ–ಇಂಡಿಯಾ ಫೌಂಡೇಷನ್’ ಪ್ರತಿಪಾದಿಸಿದೆ.
‘ಉಗ್ರವಾದ ಸಿದ್ಧಾಂತದ ವಿಭಜಕ ಶಕ್ತಿಗಳ ವಿರುದ್ಧ ನಾವು ಜಾಗರೂಕರಾಗಿರುವುದು ಅತ್ಯಗತ್ಯ. ಇದು ಅಂತರರಾಷ್ಟ್ರೀಯ ಸಂಬಂಧಗಳನ್ನು ಹಾಳುಮಾಡುವುದು ಮಾತ್ರವಲ್ಲದೆ ಕೆನಡಾದ ಹೆಗ್ಗುರುತಾದ ಶಾಂತಿ, ಭದ್ರತೆ ಮತ್ತು ಎಲ್ಲರ ಒಳಗೊಳ್ಳುವಿಕೆಗೆ ಅಪಾಯವನ್ನುಂಟುಮಾಡುತ್ತದೆ’ ಎಂದು ಅದು ಹೇಳಿದೆ.
ಆರ್‌ಎಸ್‌ಎಸ್ ನಿಷೇಧಿಸಿ: ಜಗ್‌ಮೀತ್
ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆಯಲ್ಲಿ ಕೆಲವು ಭಾರತೀಯ ರಾಜತಾಂತ್ರಿಕರು ಭಾಗಿಯಾಗಿದ್ದಾರೆ ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್‌ಸಿಎಂಪಿ) ಆರೋಪಿಸಿರುವ ಬೆನ್ನಲ್ಲೆ ಕೆನಡಾದ ಸಿಖ್ ನಾಯಕ ಜಗ್‌ಮೀತ್ ಸಿಂಗ್, ಆರ್‌ಎಸ್‌ಎಸ್ ನಿಷೇಧಿಸಬೇಕು ಮತ್ತು ಭಾರತೀಯ ರಾಜತಾಂತ್ರಿಕರ ವಿರುದ್ಧ ನಿರ್ಬಂಧಗಳನ್ನು ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಖಾಲಿಸ್ತಾನಿ ಪ್ರತ್ಯೇಕತಾವಾದ ಪರ ನಿಲುವು ಹೊಂದಿರುವ ಸಿಂಗ್ ನ್ಯೂ ಡೆಮಾಕ್ರಟಿಕ್ ಪಕ್ಷದ (ಎನ್‌ಡಿಪಿ) ನಾಯಕರಾಗಿದ್ದು, ಅವರು ಈ ಹಿಂದೆ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸರ್ಕಾರವನ್ನು ಬೆಂಬಲಿಸಿದ್ದರು.
ಕೆನಡಾದ ಪ್ರಜೆಗಳನ್ನು ರಕ್ಷಿಸಲು ತೆಗೆದುಕೊಳ್ಳಬಹುದಾದ ಇತರ ಕ್ರಮಗಳ ಬಗ್ಗೆ ಅರಿಯಲು ಸಾರ್ವಜನಿಕ ಭದ್ರತಾ ಸಮಿತಿ ತುರ್ತು ಸಭೆ ನಡೆಸಬೇಕು ಎಂದು ಒಟ್ಟಾವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ. ‘ಭಾರತೀಯ ರಾಜತಾಂತ್ರಿಕರ ಮೇಲೆ ಕೆನಡಾ ಸರ್ಕಾರವು ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಬೇಕು. ಕೆನಡಾ ಮತ್ತು ಇತರ ದೇಶಗಳಲ್ಲಿಯೂ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪು ಆಗಿರುವ ಭಾರತದ ಆರ್‌ಎಸ್‌ಎಸ್ ಸಂಘಟನೆಯನ್ನು ನಿಷೇಧಿಸಬೇಕು’ ಎಂದು ಸಿಂಗ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.