ವಾಸಾ (ಪೋಲೆಂಡ್): ಯಾವುದೇ ಸಮಸ್ಯೆಗೆ ಯುದ್ಧರಂಗದಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂಬುದು ಭಾರತದ ಬಲವಾದ ನಂಬಿಕೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯ ಪುನರ್‌ಸ್ಥಾಪನೆಗೆ ಸಾಧ್ಯವಿರುವ ಎಲ್ಲ ರೀತಿಯ ಸಹಕಾರ ನೀಡಲು ಭಾರತ ಸಿದ್ಧವಿದೆ ಎಂದು ಹೇಳಿದ್ದಾರೆ.
ಯುದ್ಧಪೀಡಿತ ಉಕ್ರೇನ್‌ಗೆ ಭೇಟಿ ನೀಡುವ ಒಂದು ದಿನ ಮೊದಲು ಪ್ರಧಾನಿ ಈ ಮಾತು ಹೇಳಿದ್ದಾರೆ. ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರ ಜೊತೆ ವಿಸ್ತೃತ ಮಾತುಕತೆ ನಡೆಸಿದ ಮೋದಿ ಅವರು ಹೀಗೆ ಹೇಳಿದ್ದಾರೆ.
ಪೋಲೆಂಡ್ ಹಾಗೂ ಉಕ್ರೇನ್ ಪ್ರವಾಸಕ್ಕೆ ತೆರಳಿರುವ ಮೋದಿ ಅವರು, ಪೋಲೆಂಡ್‌ನಿಂದ ಉಕ್ರೇನ್ ರಾಜಧಾನಿ ಕೀವ್‌ಗೆ ರೈಲಿನ ಮೂಲಕ ತೆರಳಲಿದ್ದಾರೆ. ಉಕ್ರೇನ್‌ಗೆ ಭೇಟಿ ನೀಡುವಂತೆ ಮೋದಿ ಅವರಿಗೆ ಅಲ್ಲಿನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಆಹ್ವಾನ ನೀಡಿದ್ದರು. ರೈಲು ಪ್ರಯಾಣವು ಅಂದಾಜು 10 ತಾಸಿನದ್ದಾಗಿರಲಿದೆ. ಮೋದಿ ಅವರು ಕೀವ್‌ನಲ್ಲಿ ಸುಮಾರು ಏಳು ತಾಸು ಇರಲಿದ್ದಾರೆ.
‘ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ನಮ್ಮೆಲ್ಲರಿಗೂ ಕಳವಳ ಮೂಡಿಸುವಂಥದ್ದು’ ಎಂದು ಮೋದಿ ಅವರು ಟಸ್ಕ್ ಜೊತೆಗಿನ ಮಾತುಕತೆ ನಂತರ ಬಿಡುಗಡೆ ಮಾಡಿರುವ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಯಾವುದೇ ಬಿಕ್ಕಟ್ಟು ಸೃಷ್ಟಿಯಾದಾಗ ಅಮಾಯಕರು ಪ್ರಾಣ ಕಳೆದುಕೊಳ್ಳುವುದು ಇಡೀ ಮನುಕುಲಕ್ಕೆ ಬಹಳ ದೊಡ್ಡ ಸವಾಲಾಗಿ ಪರಿಣಮಿಸಿದೆ. ಶಾಂತಿ ಮತ್ತು ಸ್ಥಿರತೆ ಬಹುಬೇಗ ಮರಳುವಂತೆ ಆಗಲು ನಾವು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗವನ್ನು ಬೆಂಬಲಿಸುತ್ತೇವೆ’ ಎಂದು ಮೋದಿ ಅವರು ಹೇಳಿದ್ದಾರೆ.
‘ಈ ವರ್ಷ ನಾವು ಪೋಲೆಂಡ್ ಜೊತೆಗಿನ ನಮ್ಮ ರಾಜತಾಂತ್ರಿಕ ಸಂಬಂಧದ 70ನೆಯ ವರ್ಷವನ್ನು ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಸಂಬಂಧವನ್ನು ಪರಸ್ಪರ ಸಹಕಾರದ, ಉನ್ನತ ಮಟ್ಟದ ಸಂಬಂಧವನ್ನಾಗಿ ಪರಿವರ್ತಿಸುತ್ತಿದ್ದೇವೆ’ ಎಂದೂ ಅವರು ಹೇಳಿದ್ದಾರೆ.
‘ಭಾರತದಲ್ಲಿಯೇ ತಯಾರಿಸಿ’ ಉಪಕ್ರಮಕ್ಕೆ ಕೈಜೋಡಿಸುವಂತೆ ಮೋದಿ ಅವರು ಪೋಲೆಂಡ್ ಕಂಪನಿಗಳನ್ನು ಆಹ್ವಾನಿಸಿದರು. ಪೋಲೆಂಡ್ ಪ್ರಧಾನಿ ಜೊತೆಗಿನ ಮಾತುಕತೆಗೂ ಮೊದಲು ಮೋದಿ ಅವರಿಗೆ ಕೆಂಪುಹಾಸಿನ ಸ್ವಾಗತ ನೀಡಲಾಯಿತು.
ಅಮಾಯಕರು ಪ್ರಾಣ ಕಳೆದುಕೊಳ್ಳುವುದು ಮನುಕುಲಕ್ಕೆ ಸವಾಲು: ಮೋದಿ ‘ಭಾರತದಲ್ಲಿಯೇ ತಯಾರಿಸಿ’ಗೆ ಕೈಜೋಡಿಸಲು ಪೋಲೆಂಡ್ ಕಂಪನಿಗಳಿಗೆ ಆಹ್ವಾನ ಪೋಲೆಂಡ್‌ನಿಂದ ಉಕ್ರೇನ್‌ಗೆ ರೈಲಿನಲ್ಲೇ ಸಾಗಲಿರುವ ಭಾರತದ ಪ್ರಧಾನಿ
ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟು ನಮ್ಮೆಲ್ಲರಿಗೂ ಕಳವಳ ಮೂಡಿಸುವಂಥದ್ದು– ನರೇಂದ್ರ ಮೋದಿ ಭಾರತದ ಪ್ರಧಾನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.