ಕಜಾನ್: ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷವನ್ನು ಶಾಂತಿಯುತವಾಗಿ ಪರಿಹರಿಸಬೇಕಿದೆ, ಇದಕ್ಕಾಗಿ ಸಾಧ್ಯವಿರುವ ಎಲ್ಲ ಬಗೆಯ ಸಹಕಾರ ನೀಡಲು ಭಾರತವು ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಜೊತೆಗಿನ ಮಾತುಕತೆ ಸಂದರ್ಭದಲ್ಲಿ ಹೇಳಿದರು.
ಬ್ರಿಕ್ಸ್ ಸಂಘಟನೆಯ 16ನೆಯ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ಅವರು ಇಲ್ಲಿಗೆ ಬಂದಿದ್ದಾರೆ. ಅವರು ಅಧ್ಯಕ್ಷ ಪುಟಿನ್ ಜೊತೆ ಮಂಗಳವಾರ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಮಾತುಕತೆಯ ಆರಂಭದಲ್ಲಿ ಮೋದಿ ಅವರು, ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಆದಷ್ಟು ಬೇಗ ಮರಳುವಂತೆ ಆಗುವುದನ್ನು ಭಾರತವು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸುತ್ತದೆ ಎಂದು ಹೇಳಿದರು.
ಮೂರು ತಿಂಗಳ ಅವಧಿಯಲ್ಲಿ ತಾವು ರಷ್ಯಾಕ್ಕೆ ಎರಡನೆಯ ಬಾರಿಗೆ ಭೇಟಿ ನೀಡುತ್ತಿರುವುದು, ರಷ್ಯಾ ಮತ್ತು ಭಾರತದ ನಡುವಿನ ನಿಕಟ ಸಹಕಾರ ಹಾಗೂ ಆಳವಾದ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ಮೋದಿ ಹೇಳಿದರು.
‘ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ವಿಚಾರವಾಗಿ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ನಾನು ಮೊದಲೇ ಹೇಳಿರುವಂತೆ, ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳಬೇಕು’ ಎಂದು ಪ್ರಧಾನಿ ಸಲಹೆ ನೀಡಿದರು.
‘ನಮ್ಮ ಎಲ್ಲ ಪ್ರಯತ್ನಗಳು ಮನುಕುಲಕ್ಕೆ, ಮಾನವೀಯತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತವೆ. ಮುಂದಿನ ದಿನಗಳಲ್ಲಿ ಸಾಧ್ಯವಿರುವ ಎಲ್ಲ ಬಗೆಯ ಸಹಕಾರ ನೀಡಲು ಭಾರತ ಸಿದ್ಧವಿದೆ’ ಎಂದು ಮೋದಿ ಅವರು ಭರವಸೆ ನೀಡಿದರು.
ಭಾರತ ಮೂಲದವರಿಂದ ಸ್ವಾಗತ
ಪ್ರಧಾನಿ ನರೇಂದ್ರ ಮೋದಿ ಅವರು ಕಜಾನ್‌ಗೆ ಮಂಗಳವಾರ ಬಂದಾಗ, ಸಂಸ್ಕೃತ ಗೀತೆ, ರಷ್ಯನ್ ನೃತ್ಯ ಹಾಗೂ ಇಸ್ಕಾನ್ ಬೆಂಬಲಿಗರ ಕೃಷ್ಣ ಭಜನೆಯ ಮೂಲಕ ಸ್ವಾಗತ ನೀಡಲಾಯಿತು.
ಮೋದಿ ಅವರಿಗೆ ಇಲ್ಲಿನ ಹೋಟೆಲ್‌ನಲ್ಲಿ ಭಾರತೀಯ ಮೂಲದವರು ತ್ರಿವರ್ಣ ಧ್ವಜ ಹಿಡಿದು, ಘೋಷಣೆಗಳನ್ನು ಕೂಗುತ್ತ ಸ್ವಾಗತ ನೀಡಿದರು.
ರಷ್ಯಾದ ಕಲಾವಿದರು ಭಾರತದ ಸಾಂಪ್ರದಾಯಿಕ ಉಡುಗೆ ಧರಿಸಿ, ರಷ್ಯಾದ ನೃತ್ಯವೊಂದನ್ನು
ಪ್ರದರ್ಶಿಸಿದರು. ಮೋದಿ ಅವರು ಇದನ್ನು ಆಸಕ್ತಿಯಿಂದ ವೀಕ್ಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.