ಕೇವಲ ಹದಿನೈದು ವರ್ಷದಲ್ಲಿ ಸುಮಾರು 41.5 ಕೋಟಿ ಭಾರತೀಯರು ಕಡು ಬಡತನದಿಂದ (ಮಲ್ಟಿಡೈಮೆನ್ಷನಲ್ ಪಾವರ್ಟಿ) ಹೊರಬಂದಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಮಾಡಿದೆ. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದ ಅತಿ ದೊಡ್ಡ ಸಾಧನೆ ಇದು ಬಣ್ಣಿಸಿದೆ.
2005–2006 ರಿಂದ ಹಿಡಿದು 2019–2021ರ ನಡುವೆ ಬಹು ಆಯಾಮಗಳ ಬಡತನದಿಂದ (ಮನೆ, ವಿದ್ಯುತ್, ಶಿಕ್ಷಣ, ನೈರ್ಮಲ್ಯ, ಪೌಷ್ಠಿಕ ಆಹಾರ ಇತ್ಯಾದಿಗಳಿಂದ ವಂಚಿತರಾದವರು) ಹೊರಬಂದವರ ಸಂಖ್ಯೆಯನ್ನು ವರದಿ ಮಾಡಿದೆ. ಭಾರತ ಸೇರಿದಂತೆ 25 ದೇಶಗಳು15 ವರ್ಷಗಳಲ್ಲಿ ಕಡು ಬಡತನದ (ಎಂಪಿಐ ಮೌಲ್ಯ) ಪ್ರಮಾಣವನ್ನು ಅರ್ಧಕ್ಕೆ ಇಳಿಸಿವೆ ಎಂದು ವರದಿ ಹೇಳಿದೆ.
ಯುನಿಟೈಡೆಡ್ ನೇಷನ್ ಡೆವಲಪ್‌ಮೆಂಟ್ ಪ್ರೋಗ್ರಾಮ್(ಯುಎನ್‌ಡಿಪಿ) , ಆಕ್ಸ್‌ಫರ್ಡ್ ಪಾವರ್ಟಿ ಆ್ಯಂಡ್ ಹ್ಯೂಮನ್ ಡೆವಲಪ್‌ಮೆಂಟ್ ಇನಿಷೇಟಿವ್(ಓಪಿಎಚ್‌ಫಿ) ಸಂಸ್ಥೆಗಳು ಬಿಡುಗಡೆ ಮಾಡಿರುವ 'ಗ್ಲೋಬಲ್ ಮಲ್ಟಿಡೈಮೆನ್ಷನಲ್ ಪಾವರ್ಟಿ' ಸೂಚ್ಯಂಕದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
'ಭಾರತದಲ್ಲಿ ಕಡು ಬಡತನ ಪ್ರಮಾಣ ಕಡಿಮೆಯಾಗಿದೆ. ಕೇವಲ15 ವರ್ಷದಲ್ಲಿ ಸುಮಾರು 41.5 ಕೋಟಿ ಜನರು ಕಡು ಬಡತನದಿಂದ ಹೊರಬಂದಿದ್ದಾರೆ. 2005–2006ರಲ್ಲಿ ಶೇಕಡ 55.1ರಷ್ಟು ಮತ್ತು 2019–2021ರಲ್ಲಿ ಶೇಕಡ 16ರಷ್ಟು ಜನರು ಕಡು ಬಡತನದ ಸುಳಿಯಿಂದ ಹೊರಬಂದಿದ್ದಾರೆ' ಎಂದು ವರದಿ ಹೇಳಿದೆ.
'2005–2006ರಲ್ಲಿ ಭಾರತದಲ್ಲಿ ಸುಮಾರು 64.5 ಕೋಟಿ ಜನರು ಕಡು ಬಡತನದಿಂದ ಬಳಲುತ್ತಿದ್ದರು. 2015–2016ರಲ್ಲಿ ಸರಿ ಸುಮಾರು 37 ಕೋಟಿ ಜನರು ಇದರಿಂದ ಹೊರಬಂದರು ಮತ್ತು 2019–2021ರಲ್ಲಿ ಸುಮಾರು 23 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ' ಎಂದು ತಿಳಿಸಿದೆ.
'ಈ ಅವಧಿಯಲ್ಲಿ ಹಿಂದೂಳಿದ ರಾಜ್ಯಗಳು, ಗುಂಪುಗಳು ಸೇರಿದಂತೆ ಎಲ್ಲರೂ ಅತ್ಯಂತ ವೇಗವಾಗಿ ಪ್ರಗತಿ ಹೊಂದಿದ್ದಾರೆ' ಎಂದು ವರದಿ ಮಾಡಿದೆ.
ಕಡು ಬಡತನದ ಪ್ರಮಾಣ ಇಳಿಕೆ
ಬಡವರು ಮತ್ತು ಹಸಿವಿನಿಂದ ಬಳಲುವರ ಪ್ರಮಾಣ 2005–2006ರಲ್ಲಿ ಶೇಕಡ 44.3ರಿಂದ 2019–2021ರಲ್ಲಿ ಶೇ.11.8ಕ್ಕೆ ಇಳಿದಿದೆ. ಮಕ್ಕಳ ಮರಣ ಪ್ರಮಾಣದಲ್ಲಿ ಶೇ. 4.5ರಿಂದ ಶೇ.1.5ಕ್ಕೆ ಇಳಿದಿದೆ . ನೈರ್ಮಲ್ಯದಿಂದ ವಂಚಿತರಾದವರ ಪ್ರಮಾಣ ಶೇ.50.4ರಿಂದ ಶೇ. 11.3ಕ್ಕೆ ಇಳಿದಿದೆ. ಅಡುಗೆ ಇಂಧನ ವಂಚಿತರ ಪ್ರಮಾಣ ಶೇ.52.9ರಿಂದ ಶೇ.13.9ಕ್ಕೆ ಇಳಿದಿದೆ. ಶುದ್ಧ ಕುಡಿಯುವ ನೀರಿನ ಪ್ರಮಾಣ ಶೇ. 16.4ರಿಂದ ಶೇ.2.7ಕ್ಕೆ ಇಳಿದಿದೆ. ವಿದ್ಯುತ್ ವಂಚಿತ ಕುಟುಂಬಗಳ ಪ್ರಮಾಣ ಶೇ. 29ರಿಂದ ಶೇ.2.1ಕ್ಕೆ ಮತ್ತು ಮನೆ ವಂಚಿತರ ಪ್ರಮಾಣ ಶೇ. 44.9ರಿಂದ 13.6ಕ್ಕೆ ಇಳಿದಿದೆ ಎಂದು ವರದಿ ತಿಳಿಸಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.