ನವದೆಹಲಿ: ಆಫ್ರಿಕಾದ ಜಾಂಬಿಯಾ ದೇಶದಲ್ಲಿ ಕಾಲರಾ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಭಾರತದಿಂದ ಮಾನವೀಯ ನೆರವು ರವಾನಿಸಲಾಗಿದೆ.
ಔಷಧ ಸೇರಿದಂತೆ 3.5 ಟನ್‌ನಷ್ಟು ನೆರವನ್ನು ಕಾರ್ಗೊ ವಾಣಿಜ್ಯ ವಿಮಾನದ ಮೂಲಕ ಮಂಗಳವಾರ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಸರಿಸುಮಾರು 3.5 ಟನ್ ತೂಕದ ವಸ್ತುಗಳನ್ನು ರವಾನಿಸಲಾಗಿದೆ. ನೀರಿನ ಶುದ್ಧೀಕರಣ ಯಂತ್ರ, ಕ್ಲೋರಿನ್ ಮಾತ್ರೆಗಳು ಮತ್ತು ಒಆರ್‌ಎಸ್ (ORS) ಪೊಟ್ಟಣಗಳನ್ನು ನೀಡಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
2024 ಜನವರಿ 31ರ ಅಂಕಿ ಅಂಶದ ಪ್ರಕಾರ, ಜಾಂಬಿಯಾ ದೇಶದಲ್ಲಿ ಕಾಲರಾ ಸೋಂಕಿಗೆ 16 ಸಾವಿರಕ್ಕೂ ಹೆಚ್ಚು ಜನ ತುತ್ತಾಗಿದ್ದು, 600 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಮರಣ ಪ್ರಮಾಣ ಶೇ 4ರಷ್ಟು ತಲುಪಿದ್ದು, ಲುಸಾಕಾ ಪ್ರಾಂತ್ಯದಲ್ಲೇ ಹೆಚ್ಚು ಸಾವು ಸಂಭವಿಸಿವೆ. ಕಾಲರಾದಿಂದ ಸುಮಾರು 3 ಲಕ್ಷ ಜನ ಅಪಾಯದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಕಾಲರಾ ಕಲುಷಿತ ನೀರಿನಿಂದ ಹರಡುತ್ತದೆ. ವಾಂತಿ, ಬೇದಿ, ನಿರ್ಜಲೀಕರಣ ಅದರ ಮುಖ್ಯ ಲಕ್ಷಣವಾಗಿದೆ.
ಮೇ ತಿಂಗಳವರೆಗೆ ಜಾಂಬಿಯಾದಲ್ಲಿ ಮಳೆಗಾಲ ಇರಲಿದೆ. ವಿಪರೀತ ಮಳೆ, ಪ್ರವಾಹದ ಪರಿಸ್ಥಿತಿಯಿಂದಾಗಿ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.