ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿ ಆಯ್ಕೆಗೊಂಡಿರುವ ಭಾರತದ ಅಧಿಕಾರಾವಧಿ ಶುಕ್ರವಾರ ಆರಂಭವಾಯಿತು.
ಅಧಿಕಾರಾವಧಿ ಎರಡು ವರ್ಷ ಇರಲಿದೆ. ಕಳೆದ ಜೂನ್ 18ರಂದು ನಡೆದ ಚುನಾವಣೆಯಲ್ಲಿ ಭಾರತ ಈ ಸ್ಥಾನಕ್ಕೆ ಆಯ್ಕೆಯಾಗಿತ್ತು.
ಆಗಸ್ಟ್‌ನಲ್ಲಿ ಭಾರತ ಈ ಭದ್ರತಾ ಮಂಡಳಿಯ ಅಧ್ಯಕ್ಷ ರಾಷ್ಟ್ರವಾಗಿ ಅಧಿಕಾರ ಸ್ವೀಕರಿಸಲಿದೆ. ಅಧ್ಯಕ್ಷ ಸ್ಥಾನದ ಅವಧಿ ಒಂದು ತಿಂಗಳು ಮಾತ್ರ.
ಸದಸ್ಯ ರಾಷ್ಟ್ರಗಳ ಇಂಗ್ಲಿಷ್ ಹೆಸರಿನ ಮೊದಲ ಅಕ್ಷರಗಳ ಅನುಕ್ರಮದಲ್ಲಿ ಆಯಾ ರಾಷ್ಟ್ರಗಳಿಗೆ ಅಧ್ಯಕ್ಷ ಸ್ಥಾನವನ್ನು ನೀಡಲಾಗುತ್ತದೆ.
‘ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ಪ್ರಜಾತಂತ್ರ, ಮಾನವ ಹಕ್ಕುಗಳು ಹಾಗೂ ಅಭಿವೃದ್ಧಿ ಸೇರಿದಂತೆ ಮೂಲಭೂತ ಮೌಲ್ಯಗಳನ್ನು ಎತ್ತಿ ಹಿಡಿಯಲು ಸದಾ ಶ್ರಮಿಸುತ್ತದೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಹೇಳಿದರು.
‘ವಿಶ್ವಸಂಸ್ಥೆ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತದೆ. ಅದರ ಆಶಯದ ಚೌಕಟ್ಟಿನಲ್ಲಿಯೇ ವೈವಿಧ್ಯವು ಪ್ರಜ್ವಲಿಸಬೇಕು ಎಂಬ ತತ್ವಕ್ಕೆ ಭಾರತ ಬದ್ಧವಾಗಿದೆ. ಇದೇ ಆಶಯದೊಂದಿಗೆ ಭಾರತ ಭದ್ರತಾ ಮಂಡಳಿಯಲ್ಲಿ ಕಾರ್ಯ ನಿರ್ವಹಿಸಲಿದೆ’ ಎಂದೂ ಹೇಳಿದರು.
ಭಾರತದೊಂದಿಗೆ ನಾರ್ವೆ, ಕೀನ್ಯಾ, ಐರ್ಲೆಂಡ್ ಹಾಗೂ ಮೆಕ್ಸಿಕೊ ರಾಷ್ಟ್ರಗಳು ಸಹ ಶಾಶ್ವತವಲ್ಲದ ಸದಸ್ಯ ರಾಷ್ಟ್ರಗಳಾಗಿ ಆಯ್ಕೆಗೊಂಡಿದ್ದು, ಅವುಗಳ ಅಧಿಕಾರಾವಧಿ ಸಹ ಆರಂಭವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.