ಮೆಲ್ಬರ್ನ್: ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಸ್ಥಾನಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಬರೆಯುವುದು ಹಾಗೂ ದೇವಸ್ಥಾನಗಳನ್ನು ಧ್ವಂಸ ಮಾಡುತ್ತಿರುವುದನ್ನು ಭಾರತ ತೀವ್ರವಾಗಿ ಖಂಡಿಸಿದೆ.
ಕಳೆದ ತಿಂಗಳಿಂದ ಇಲ್ಲಿಯವರೆಗೆ, ಇಲ್ಲಿನ ಸ್ವಾಮಿನಾರಾಯಣ ಹಾಗೂ ಇಸ್ಕಾನ್ ದೇವಸ್ಥಾನ, ಕಾರಂ ಡೌನ್ಸ್‌ನಲ್ಲಿರುವ ಐತಿಹಾಸಿಕ ಶಿವ–ವಿಷ್ಣು ದೇವಸ್ಥಾನಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಬರೆದು, ದೇವಸ್ಥಾನವನ್ನು ಧ್ವಂಸಗೊಳಿಸಲಾಗಿದೆ.
‘ಭಾರತ ವಿರೋಧಿ ಭಯೋತ್ಪಾದಕರನ್ನು ವೈಭವೀಕರಿಸಿ, ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡುವುದನ್ನು ನಿರ್ಭೀಡೆಯಿಂದ, ಪದೇ ಪದೇ ಮಾಡಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇದು ಎಚ್ಚರಿಕೆ ಗಂಟೆಯಾಗಿದೆ’ ಎಂದು ಕ್ಯಾನ್‌ಬೆರಾದಲ್ಲಿರುವ ಭಾರತದ ರಾಯಭಾರ ಕಚೇರಿಯು ಗುರುವಾರ ಹೇಳಿಕೆ ಬಿಡುಗಡೆ ಮಾಡಿದೆ.
‘ಆಸ್ಟ್ರೇಲಿಯಾದಲ್ಲಿ ಖಾಲಿಸ್ತಾನಿ ಬೆಂಬಲಿಗರ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಸಿಖ್ಸ್ ಫಾರ್ ಜಸ್ಟೀಸ್ (ಎಸ್‌ಎಫ್‌ಜೆ) ಎನ್ನುವ ನಿಷೇಧಿತ ಭಯೋತ್ಪಾದನಾ ಸಂಸ್ಥೆ ಹಾಗೂ ಆಸ್ಟ್ರೇಲಿಯಾದ ಹೊರಗೆ ಇರುವ ಇಂಥ ಸಂಸ್ಥೆಗಳು ಈ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿವೆ’ ಎಂದು ಭಾರತ ಆರೋಪಿಸಿದೆ.
‘ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸುತ್ತಿರುವ ಘಟನೆಗಳಿಂದ ಆಘಾತವಾಗಿದೆ. ಈ ಕುರಿತು ತನಿಖೆ ನಡೆಯುತ್ತಿದೆ’ ಎಂದು ಭಾರತದಲ್ಲಿರುವ ಆಸ್ಟ್ರೇಲಿಯಾದ ರಾಯಭಾರ ಕಚೇರಿಯು ಹೇಳಿದೆ.
ಈ ಕೃತ್ಯ ನಡೆಸುತ್ತಿರುವವರಿಗೆ ಶಿಕ್ಷೆಯಾಗಬೇಕು. ಜೊತೆಗೆ ದೇಶದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು
-ಭಾರತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.