ದಾವೋಸ್: ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ (ಸಿಪಿಐ–2019) ಪಟ್ಟಿಯಲ್ಲಿ ಭಾರತಕ್ಕೆ 80ನೇ ಸ್ಥಾನ ಲಭಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಎರಡು ಸ್ಥಾನಕ ಕುಸಿದಿದೆ.
ದಾವೋಸ್‌ನಲ್ಲಿ ವಿಶ್ವ ಆರ್ಥಿಕ ವೇದಿಕೆ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 180 ದೇಶ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ, 100 ಅಂಕಗಳಿಗೆ ಭಾರತ 41 ಅಂಕ ಪಡೆದಿದು 80ನೇ ಸ್ಥಾನ ಪಡೆದಿದೆ. ಕಳೆದ ವರ್ಷ 78ನೇ ಸ್ಥಾನದಲ್ಲಿತ್ತು.
ಜರ್ಮನಿಯ ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್' (ಟಿಐ) ಸರ್ಕಾರೇತರ ಸಂಸ್ಥೆ ಈ ವರದಿಯನ್ನು ಸಿದ್ಧಪಡಿಸುತ್ತದೆ. ಸಾರ್ವಜನಿಕ ವಲಯದಲ್ಲಿ ನಡೆಯುವ ಭ್ರಷ್ಟಾಚಾರ ಕುರಿತು ಸಮೀಕ್ಷೆ ನಡೆಸಿ, ಅದರ ಆಧಾರದ ಮೇಲೆ ರ‍್ಯಾಂಕ್ ನೀಡಲಾಗುತ್ತದೆ.
ನ್ಯೂಜಿಲೆಂಡ್ ಮತ್ತು ಡೆನ್ಮಾರ್ಕ್ 87 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಸಿರಿಯಾ, ದಕ್ಷಿಣ ಸುಡಾನ್, ಸೊಮಾಲಿಯಾ ತಲಾ 13, 12 ಮತ್ತು 9 ಅಂಕಗಳನ್ನು ಪಡೆದು ಕೊನೆಯ ಸ್ಥಾನಗಳಲ್ಲಿವೆ.
ಫಿನ್ಲೆಂಡ್ಗೆ 3ನೇ ಸ್ಥಾನ, ಸಿಂಗಪೂರ್‌ಗೆ 4, ಸ್ವೀಡನ್‌ಗೆ 5 ಹಾಗೂ ಸ್ವಿಟ್ಜರ್ಲೆಂಡ್ಗೆ ಆರನೇ ಸ್ಥಾನ ದೊರೆತಿದ್ದು, ವಿಶ್ವದ ಭ್ರಷ್ಟಾಚಾರ ರಹಿತ ದೇಶಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಇನ್ನೂ ಕೊನೆಯ 6 ಸ್ಥಾನದಲ್ಲಿ ವೆನುಜುವೆಲ್ಲಾ, ಯೆಮನ್, ಸಿರಿಯಾ, ದಕ್ಷಿಣ ಸುಡಾನ್, ಸೊಮಾಲಿಯಾ ಇವೆ.
2018ರಲ್ಲಿ ಮೂರು ಸ್ಥಾನ ಸುಧಾರಿಸಿತ್ತು ಭಾರತ
2016ರಲ್ಲಿ 176 ರಾಷ್ಟ್ರಗಳ ಪೈಕಿ ಭಾರತವು 79ನೇ ಸ್ಥಾನದಲ್ಲಿತ್ತು. 2017ರಲ್ಲಿ ಎರಡು ಸ್ಥಾನ ಕುಸಿತ ಕಂಡು 81ನೇ ಸ್ಥಾನಕ್ಕೆ ಕುಸಿದಿತ್ತು. 2018ರಲ್ಲಿ 3ಸ್ಥಾನಗಳ ಸುಧಾರಣೆ ಕಂಡು 78ನೇ ಸ್ಥಾನಕ್ಕೆ ಏರಿತ್ತು. ಇದೀಗ ಮತ್ತೆ ಎರಡು ಸ್ಥಾನ ಕುಸಿದಿದ್ದು 80ನೇ ಸ್ಥಾನಕ್ಕೆ ಇಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.