ವಾಷಿಂಗ್ಟನ್: ಭಾರತ, ಅಮೆರಿಕದ ಅತ್ಯಂತ ಪ್ರಮುಖ ಕಾರ್ಯತಂತ್ರದ ಪಾಲುದಾರ ದೇಶ. ಆದರೆ ಅಮೆರಿಕ ನಾಗರಿಕ ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆ ಸಂಚಿನ ಹಿಂದೆ ಯಾರಿದ್ದಾರೋ ಅವರನ್ನು ಶಿಕ್ಷೆಗೆ ಗುರಿಯಾಗಿಸಬೇಕು ಎಂದು ಶ್ವೇತಭವನ ಹೇಳಿದೆ.
ಭಾರತ ಹಾಗೂ ಅಮೆರಿಕದ ನಡುವಣ ಬಾಂಧವ್ಯ ಮತ್ತಷ್ಟು ಸದೃಢವಾಗಿದೆ. ಭಾರತ-ಅಮೆರಿಕ ಕ್ವಾಡ್ ಸದಸ್ಯ ರಾಷ್ಟ್ರಗಳಾಗಿವೆ. ಉಭಯ ರಾಷ್ಟ್ರಗಳು ಅನೇಕ ಸಮಸ್ಯೆಗಳ ಕುರಿತು ಮಾತುಕತೆ ನಡೆಸುತ್ತಿವೆ. ಅದೇ ಹೊತ್ತಿಗೆ ಈ ಆರೋಪಗಳ ಗಂಭೀರತೆಯನ್ನು ಮನಗಂಡಿದ್ದೇವೆ ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.
ಈ ಹತ್ಯೆ ಸಂಚು ಭಾರತ ಹಾಗೂ ಅಮೆರಿಕ ದ್ವಿಪಕ್ಷೀಯ ಸಂಬಂಧ ಮೇಲೆ ಪರಿಣಾಮ ಬೀರಬಹುದೇ ಎಂಬುದಕ್ಕೆ ಪ್ರತಿಕ್ರಿಯಿಸಿದ ಕಿರ್ಬಿ, ನಾವು ಸಮಗ್ರ ತನಿಖೆ ನಡೆಸಬೇಕೆಂದು ಬಯಸುತ್ತೇವೆ. ಇದರ ಸಂಚಿನ ಹಿಂದೆ ಯಾರಿದ್ದಾರೋ ಅವರನ್ನ ಹೊಣೆಗಾರರನ್ನಾಗಿ ಮಾಡಬೇಕು ಎಂದು ಹೇಳಿದರು.
ತನಿಖೆ ಪ್ರಗತಿಯಲ್ಲಿದೆ. ಭಾರತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಂಡಿರುವುದರಲ್ಲಿ ಸಂತಸವಿದೆ. ತನಿಖೆ ಕೊನೆಗೊಳ್ಳುವುದಕ್ಕಿಂತಲೂ ಮೊದಲು ಈ ಕುರಿತು ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಘೋಷಿತ ಖಾಲಿಸ್ತಾನಿ ಉಗ್ರ ಹಾಗೂ ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್‌ನ (ಎಸ್‌ಜೆಎಫ್) ಗುರುಪತ್ವಂತ್ ಸಿಂಗ್ ಪನ್ನೂ ಹತ್ಯೆಗೆ ಯತ್ನ ನಡೆಸಲಾಗಿತ್ತು ಎಂದು ವರದಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.