ADVERTISEMENT

ಭಾರತದೊಡನೆ ಬಾಂಧವ್ಯ ಅಬಾಧಿತ: ಅಮೆರಿಕ ಪುನರುಚ್ಚಾರ

ಪಿಟಿಐ
Published 10 ಜುಲೈ 2024, 13:19 IST
Last Updated 10 ಜುಲೈ 2024, 13:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ರಷ್ಯಾದೊಡನೆ ಭಾರತವು ಬಾಂಧವ್ಯ ಇಟ್ಟುಕೊಂಡಿದ್ದರೂ, ಆ ದೇಶದ ಜೊತೆಗಿನ ಕಾರ್ಯತಂತ್ರ ಪಾಲುದಾರಿಕೆ ಮುಂದುವರಿಯಲಿದೆ ಎಂದು ಅಮೆರಿಕ ಹೇಳಿದೆ. 

ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಪ್ರವಾಸ, ಭಾರತ–ರಷ್ಯಾ ಶೃಂಗಸಭೆಯ ಪ್ರಗತಿ ಎಲ್ಲವನ್ನೂ ಪಶ್ಚಿಮ ರಾಷ್ಟ್ರಗಳು ಉಕ್ರೇನ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಿವೆ.

ಪ್ರಧಾನಿ ಮೋದಿ ಅವರ ಪ್ರವಾಸ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ರಕ್ಷಣಾ ಇಲಾಖೆಯ ವಕ್ತಾರರು, ಭಾರತ–ರಷ್ಯಾ ನಡುವೆ ದೀರ್ಘಕಾಲದ ಬಾಂಧವ್ಯವಿದೆ. ಹಾಗಿದ್ದೂ ಅಮೆರಿಕದ ದೃಷ್ಟಿಕೋನದಿಂದ ಭಾರತ ಎಂದಿಗೂ ಕಾರ್ಯತಂತ್ರ ಪಾಲುದಾರ ರಾಷ್ಟ್ರವಾಗಿ ಮುಂದುವರಿಯಲಿದೆ’ ಎಂದರು. 

ADVERTISEMENT

‘ಭಾರತ ಮತ್ತು ರಷ್ಯಾ ನಡುವಣ ಭೇಟಿಯನ್ನು ನಿಮ್ಮಂತೆಯೇ ಇಡೀ ಜಗತ್ತು ಗಮನಿಸುತ್ತಿದೆ’ ಎಂದು ಪೆಂಟಗನ್‌ನ ಪತ್ರಿಕಾ ಕಾರ್ಯದರ್ಶಿ ಮೇಜರ್ ಜನರಲ್‌ ಪ್ಯಾಟ್‌ ರೈಡರ್ ಹೇಳಿದರು.

ಇನ್ನೊಂದೆಡೆ, ವಕ್ತಾರ ಮ್ಯಾಥ್ಯೂ ಮಿಲ್ಲರ್ ಅವರು, ಭಾರತದ ಜೊತೆಗಿನ ಬಾಂಧವ್ಯ ಕುರಿತು ಅಮೆರಿಕದ ನಿಲುವು ಸ್ಪಷ್ಟವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು. 

ಉಕ್ರೇನ್‌ ಬಿಕ್ಕಟ್ಟಿನ ನಡುವೆಯೂ ಭಾರತವು ರಷ್ಯಾ ಜೊತೆಗಿನ ವಿಶೇಷ ಪಾಲುದಾರಿಕೆಯನ್ನು ಸಮರ್ಥಿಸಿಕೊಂಡಿದೆ. ಉಕ್ರೇನ್‌ನಲ್ಲಿ ರಷ್ಯಾದ ಅತಿಕ್ರಮಣವನ್ನು ಭಾರತ ಖಂಡಿಸಿಲ್ಲ. ಮಾತುಕತೆ ಮೂಲಕ ಬಿಕ್ಕಟ್ಟು ಬಗೆಹರಿಸಿಕೊಳ್ಳುವಂತೆ ಪ್ರತಿಪಾದಿಸುತ್ತಿದೆ.

‘ಜಗತ್ತಿನ ಇತರೆ ರಾಷ್ಟ್ರಗಳು ನಮ್ಮನ್ನು ಕಡೆಗಣಿಸಿಲ್ಲ ಎಂದು ಬಿಂಬಿಸಿಕೊಳ್ಳಲು ಮೋದಿ ಜೊತೆಗಿನ ಭೇಟಿಯನ್ನು ಪುಟಿನ್‌ ಅವರು ಬಳಸಿಕೊಂಡರೆ ಆಶ್ಚರ್ಯವಿಲ್ಲ. ವಾಸ್ತವ ಏನೆಂದರೆ, ಯುದ್ಧ ಮಾಡುವ ಪುಟಿನ್‌ ಅವರ ಆಯ್ಕೆಯೇ ರಷ್ಯಾವನ್ನು ಇತರೆ ರಾಷ್ಟ್ರಗಳು ಕಡೆಗಣಿಸುವಂತೆ ಆಗಿದೆ. ಇದಕ್ಕಾಗಿ ಬೆಲೆ ತೆರಬೇಕಿದೆ’ ಎಂದು ರೈಡರ್ ಅವರು ಹೇಳಿದರು.  

‘ಉಕ್ರೇನ್‌ನಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ನಿಯಮಗಳ ಮಹತ್ವವನ್ನು ಪುಟಿನ್‌ ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಭಾರತ ಬೆಂಬಲಿಸಲಿದೆ ಎಂದು ಭಾವಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.