ಲಂಡನ್: ಪರಸ್ಪರ ದೇಶಗಳಿಗೆ ಲಾಭದಾಯಕವಾದ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್‌ಟಿಎ) ನಿಶ್ಚಿತಗೊಳಿಸುವ ಬದ್ಧತೆಯನ್ನು ಭಾರತ ಮತ್ತು ಬ್ರಿಟನ್ ದೃಢೀಕರಿಸಿವೆ.
ಬ್ರಿಟನ್ ಪ್ರವಾಸ ಕೈಗೊಂಡಿರುವ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು ಶುಕ್ರವಾರ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಸರ್ ಫಿಲಿಪ್ ಬಾರ್ಟನ್ ಅವರನ್ನು ಭೇಟಿ ಮಾಡಿ, ಈ ಕುರಿತು ಚರ್ಚೆ ಮಾಡಿದರು.
ಕಳೆದ ವರ್ಷದ ಜನವರಿಯಲ್ಲಿ ಈ ಒಪ್ಪಂದ ಏರ್ಪಟ್ಟಿತ್ತು. ಆಗಿನಿಂದ ಈವರೆಗೆ ಏನೆಲ್ಲಾ ಬೆಳವಣಿಗೆಗಳಾಗಿದೆ ಎಂಬುದರ ಬಗ್ಗೆ ಉಭಯ ನಾಯಕರು ಪರಿಶೀಲನೆ ನಡೆಸಿದರು. 2030ರ ದೃಷ್ಟಿಕೋನ ಹೊಂದಿರುವ ಈ ಯೋಜನೆಯು ಉತ್ತಮ ಅಭಿವೃದ್ಧಿ ಕಂಡಿದೆ ಎಂಬುದನ್ನು ಉಭಯ ನಾಯಕರು ಮನಗಂಡಿದ್ದಾರೆ. ಜೊತೆಗೆ ವಿಶ್ವದ ಅತಿ ದೊಡ್ಡ ಸವಾಲುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಭಾರತ ಮತ್ತು ಬ್ರಿಟನ್ ಒಟ್ಟಿಗೆ ಕಾರ್ಯನಿರ್ವಹಿಸಿವೆ ಎಂದು ವಿದೇಶಾಂಗ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ಕಾರ್ಯಾಲಯ ಹೇಳಿಕೆ ಬಿಡುಗಡೆ ಮಾಡಿದೆ.
ಈ ಪೈಕಿ ಮಲೇರಿಯಾಕ್ಕೆ ವಿಶ್ವದ ಮೊದಲ ಚುಚ್ಚುಮದ್ದು, ಜಿ–20 ರಾಷ್ಟ್ರಗಳಿಗೆ ಭಾರತದ ಯಶಸ್ವಿ ನಾಯಕತ್ವ, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಿಗೆ ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಪರಸ್ಪರ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.