ನವದೆಹಲಿ: ಅಧ್ಯಕ್ಷೀಯ ಚುನಾವಣೆ ಕಣದಲ್ಲಿರುವ ಡೊನಾಲ್ಡ್ ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ಅವರಲ್ಲಿ ಯಾರಿಗೇ ಜನಾದೇಶ ಸಿಕ್ಕರೂ, ಅಮೆರಿಕದೊಂದಿಗೆ ಭಾರತದ ಬಾಂಧವ್ಯ ವೃದ್ಧಿಯಾಗಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಅಧ್ಯಕ್ಷೀಯ ಚುನಾವಣೆಗೆ ಅಮೆರಿಕದಾದ್ಯಂತ ಮತದಾನ ಪ್ರಾರಂಭವಾಗುವ ಕೆಲವು ಗಂಟೆಗಳ ಮೊದಲು ಮಾತನಾಡಿರುವ ಜೈಶಂಕರ್, ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಹಾಗೂ ಅವರಿಗೂ ಮೊದಲು ಇದ್ದ ನಾಲ್ವರ ಅಧಿಕಾರಾವಧಿಯಲ್ಲೂ ವಾಷಿಂಗ್ಟನ್ ಮತ್ತು ದೆಹಲಿಯ ಸಂಬಂಧ ಸ್ಥಿರವಾದ ಪ್ರಗತಿ ಸಾಧಿಸಿದೆ ಎಂದು ಪ್ರತಿಪಾದಿಸಿದ್ದಾರೆ.
ಕ್ಯಾನ್‌ಬೆರಾದಲ್ಲಿ ಆಸ್ಟ್ರೇಲಿಯಾದ ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಜೈಶಂಕರ್, 'ಡೊನಾಲ್ಡ್ ಟ್ರಂಪ್ ಸೇರಿದಂತೆ ಹಿಂದಿನ ಐವರು ಅಧ್ಯಕ್ಷರ ಅವಧಿಗಳಲ್ಲಿ ನಾವು ಅಮೆರಿಕದೊಂದಿಗಿನ ಬಾಂಧವ್ಯದಲ್ಲಿ ಸ್ಥಿರ ಪ್ರಗತಿಯನ್ನು ಕಂಡಿದ್ದೇವೆ. ಹಾಗಾಗಿ, ಚುನಾವಣೆಯಲ್ಲಿ ಜನಾದೇಶ ಯಾರ ಪರವಾಗಿಯೇ ಬಂದರೂ, ಆ ದೇಶದ ಜೊತೆಗಿನ ಸಂಬಂಧ ವೃದ್ಧಿಯಾಗುವ ವಿಶ್ವಾಸವಿದೆ' ಎಂದಿದ್ದಾರೆ.
ಜೈಶಂಕರ್ ಹಾಗೂ ವಾಂಗ್, ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಅಮೆರಿಕವನ್ನು ಒಳಗೊಂಡಿರುವ ನಾಲ್ಕು ರಾಷ್ಟ್ರಗಳ 'ಕ್ವಾಡ್ ಒಕ್ಕೂಟ'ದ ಕುರಿತು ಚರ್ಚಿಸಿದ್ದಾರೆ.
2007ರಲ್ಲಿ ರಚನೆಯಾದ ಕ್ವಾಡ್ ಒಕ್ಕೂಟವನ್ನು, ಚೀನಾದ ಪ್ರಾಬಲ್ಯವನ್ನು ಎದುರಿಸುವ ನಿಟ್ಟಿನಲ್ಲಿ 2017ರಲ್ಲಿ ಪುನಶ್ಚೇತನಗೊಳಿಸಲಾಗಿದೆ.
'ಕ್ವಾಡ್' ಅನ್ನು ಇಂಡೋ–ಪೆಸಿಫಿಕ್ ಪ್ರದೇಶದಲ್ಲಿ ನ್ಯಾಟೋ ಮಾದರಿಯ ಭದ್ರತಾ ಮೈತ್ರಿಯನ್ನಾಗಿ ಪರಿವರ್ತಿಸಲು ಅಮೆರಿಕ ಈ ಹಿಂದೆ ಒತ್ತಡ ಹೇರಿತ್ತು. ಅದನ್ನು ವಿರೋಧಿಸಿದ್ದ ಭಾರತ, ಇಂಡೋ–ಪೆಸಿಫಿಕ್‌ನಲ್ಲಿ ತನ್ನ ಮಿಲಿಟರಿ, ರಾಜಕೀಯ ಮತ್ತು ಆರ್ಥಿಕ ಪ್ರಭಾವ ವಿಸ್ತರಿಸುವ ಚೀನಾದ ಪ್ರಯತ್ನದ ವಿರುದ್ಧ ಸೌಮ್ಯವಾದ ಕಾರ್ಯಸೂಚಿ ರಚನೆಗೆ ಒತ್ತಾಯಿಸಿತ್ತು.
ಒಂದು ವೇಳೆ ಟ್ರಂಪ್ ಅವರು ಹ್ಯಾರಿಸ್ ಎದುರು ಗೆದ್ದರೆ, 'ಕ್ವಾಡ್' ಅಸ್ತಿತ್ವದಲ್ಲಿ ಉಳಿಯಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈಶಂಕರ್, '2017ರಲ್ಲಿ ಟ್ರಂಪ್ ಅವರ ಅಧ್ಯಕ್ಷರಾಗಿದ್ದಾಗಲೇ ಕ್ವಾಡ್‌ಗೆ ಹೊಸ ರೂಪ ನೀಡಲಾಯಿತು ಎಂಬುದನ್ನು ನೆನಪಿಸಲು ಬಯಸುತ್ತೇನೆ. ವಿಶೇಷವೆಂದರೆ, ಕೋವಿಡ್ ಸಂದರ್ಭದಲ್ಲಿ ವಿದೇಶಾಂಗ ಸಚಿವರ ಭೌತಿಕ ಸಭೆಗಳು ಸ್ಥಗಿತಗೊಂಡಿದ್ದವು. ಅಂತಹ ಸಂದರ್ಭದಲ್ಲೂ, 2020ರಲ್ಲಿ ಟೊಕಿಯೊದಲ್ಲಿ ಅಪರೂಪವೆಂಬಂತೆ ಕ್ವಾಡ್ ಸಭೆ ನಡೆದಿತ್ತು' ಎಂದಿದ್ದಾರೆ.
ವಾಂಗ್ ಅವರು, 'ಕ್ವಾಡ್‌ನ ಮಹತ್ವ ನಮ್ಮಿಬ್ಬರಿಗೂ ಗೊತ್ತಿದೆ. ಇದು, ವಿವಿಧ ದೃಷ್ಟಿಕೋನಗಳನ್ನು ಹೊಂದಿರುವ ದೇಶಗಳು ತಾವು ಬಯಸುವ ಪ್ರದೇಶದ ಕುರಿತಾದ ಒಂದೇ ರೀತಿಯ ಆಸಕ್ತಿಗಳನ್ನು ಹಂಚಿಕೊಳ್ಳುವ ವ್ಯವಸ್ಥೆ. ಹಾಗಾಗಿ, ಅಮೆರಿಕ, ಭಾರತ, ಆಸ್ಟ್ರೇಲಿಯಾ ಹಾಗೂ ಜಪಾನ್ ಪಾಲಿಗೆ ಇದು ಮೌಲ್ಯಯುತ ಕಾರ್ಯತಂತ್ರದ ಗುಂಪಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶದ ಹೊರತಾಗಿಯೂ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಳ್ಳಲಿದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.