ವಾಷಿಂಗ್ಟನ್: ‘ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಮುಖ್ಯವಾದದ್ದು, ಇದರಿಂದ ಕೇವಲ ಎರಡು ದೇಶಗಳಿಗೆ ಮಾತ್ರವಲ್ಲದೇ ವಿಶ್ವಕ್ಕೂ ಒಳಿತು’ ಎಂದು ಅಮೆರಿಕದಲ್ಲಿ ಭಾರತೀಯ ರಾಯಭಾರಿ ತರಂಜಿತ್ ಸಿಂಗ್ ಸಂಧು ಹೇಳಿದರು.
ಅಮೆರಿಕದಲ್ಲಿನ ಭಾರತೀಯರೊಂದಿಗೆ ನಡೆಸಿದ ಸಂವಾದದಲ್ಲಿ ಈ ಮಾತು ಹೇಳಿದ್ದಾರೆ.
‘ನಿಮ್ಮ ಮುಂದಿನ ಪೀಳಿಗೆಗೆ ಭಾರತದೊಂದಿಗೆ ಸಂಪರ್ಕ ಇಟ್ಟುಕೊಳ್ಳುವಂತೆ ಮತ್ತು ಪದೇ ಪದೇ ಭಾರತಕ್ಕೆ ಭೇಟಿ ನೀಡುವಂತೆ ತಿಳಿಹೇಳಿ’ ಎಂದು ಅವರು ಭಾರತೀಯ ಅಮೆರಿಕನ್ನರಿಗೆ ಹೇಳಿದರು.
‘ಮುಂದಿನ ದಿನಗಳಲ್ಲಿ ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ. ಆರೋಗ್ಯ, ಇಂಧನ, ತಂತ್ರಜ್ಞಾನ, ವಿಜ್ಞಾನ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಎರಡು ದೇಶಗಳ ಸಂಬಂಧ ಉನ್ನತಮಟ್ಟದಲ್ಲಿರಲಿದೆ’ ಎಂದರು.
‘ಅಮೆರಿಕದಲ್ಲಿರುವ ಭಾರತೀಯರ ಬಗ್ಗೆ ಹೆಮ್ಮೆ ಇದೆ. ಇನ್ನೆರಡು ಕಾನ್ಸುಲೇಟ್ ಕಚೇರಿಗಳು ಶೀಘ್ರವೇ ಕಾರ್ಯಾರಂಭ ಮಾಡಲಿವೆ’ ಎಂದರು.
ಭಾರತೀಯ ವಿದೇಶಾಂಗ ಇಲಾಖೆಯಲ್ಲಿ 35 ವರ್ಷಗಳ ಸೇವೆ ಸಲ್ಲಿಸಿದ್ದ ಸಂಧು ಅವರು ತಿಂಗಳಾಂತ್ಯಕ್ಕೆ ನಿವೃತ್ತಿ ಹೊಂದಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.