ವಾಷಿಂಗ್ಟನ್/ನವದೆಹಲಿ : ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಆಡಳಿತದಲ್ಲಿ ಭಾರತ-ಅಮೆರಿಕ ನಡುವಿನ ಬಾಂಧವ್ಯ ಮತ್ತಷ್ಟು ವೃದ್ಧಿಸಲಿದೆ. ಆದರೆ, ಆಮದು ಸುಂಕ ಮತ್ತು ವಲಸೆಯಂತಹ ಕೆಲವು ವಿಷಯಗಳಲ್ಲಿ ಸ್ವಲ್ಪಮಟ್ಟಿನ ಸವಾಲುಗಳು ಎದುರಾಗಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಟ್ರಂಪ್ ಅವರ ‘ಅಮೆರಿಕವೇ ಮೊದಲು’ ಕಾರ್ಯಸೂಚಿ ಮತ್ತು ವಾಣಿಜ್ಯ ವಹಿವಾಟು ಸಂಬಂಧದ ವಿವಾದವು ಉಭಯ ರಾಷ್ಟ್ರಗಳ ಬಾಂಧವ್ಯಕ್ಕೆ ಅಗ್ನಿಪರೀಕ್ಷೆ ಒಡ್ಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಇಬ್ಬರೂ ನಾಯಕರು ಭೇಟಿಯಾದಾಗ ಪರಸ್ಪರ ಬಿಗಿದಪ್ಪಿಕೊಂಡು ತಮ್ಮ ನಡುವಿನ ಸ್ನೇಹವನ್ನು ಜಗತ್ತಿನ ಮುಂದೆ ತೋರಿಸಿದ್ದಾರೆ. ಆದರೆ, ತನ್ನ ವ್ಯಾಪಾರ ನೀತಿಯ ವಿಚಾರ ಬಂದಾಗ ಟ್ರಂಪ್ ತಮ್ಮ ಆಡಳಿತ ಅವಧಿಯಲ್ಲಿ ಭಾರತವನ್ನು ‘ಸುಂಕದ ರಾಜ’ ಮತ್ತು ‘ವ್ಯಾಪಾರ ಒಪ್ಪಂದದ ದುರುಪಯೋಗಿ’ ಎಂದು ಟೀಕಿಸಿದ್ದರು.
ಟ್ರಂಪ್ ಚುನಾವಣಾ ಪ್ರಚಾರದಲ್ಲಿ, ವಿದೇಶಿ ಸರಕುಗಳ ಮೇಲೆ ಅದರಲ್ಲೂ ವಿಶೇಷವಾಗಿ ಚೀನಾದಿಂದ ಆಮದಾಗುವ ಸರಕುಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸುವುದಾಗಿ ಪ್ರಸ್ತಾಪಿಸಿದ್ದರು. ಅಲ್ಲದೆ, ಅಕ್ರಮ ವಲಸಿಗರನ್ನು ದೇಶದಿಂದ ಹೊರದಬ್ಬಲು ‘ಗಡೀಪಾರು ಯೋಜನೆ’ ರೂಪಿಸುವ ಪ್ರತಿಜ್ಞೆ ಮಾಡಿದ್ದರು. ಭಾರತದ ಸರಕುಗಳ ಮೇಲೆ ದುಬಾರಿ ಶುಲ್ಕ ವಿಧಿಸುವುದಾಗಿಯೂ ಈ ಹಿಂದೆ ಗುಡುಗಿದ್ದರು. ಇದನ್ನು ಅವರು ಜಾರಿಗೆ ತಂದರೆ, ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಎನಿಸಿರುವ ಭಾರತದಲ್ಲಿ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ನಡುವೆ ಉತ್ತಮ ಸ್ನೇಹವಿದೆ. ಹಾಗಾಗಿ, ಎರಡೂ ದೇಶಗಳ ನಡುವೆ ಏನೇ ಸಮಸ್ಯೆಗಳು ಸೃಷ್ಟಿಯಾದರೂ ಉಭಯ ನಾಯಕರು ಸೌಹಾರ್ದದಿಂದ ಬಗೆಹರಿಸಿಕೊಳ್ಳುವ ಸಾಧ್ಯತೆಯಿದೆ ಎನ್ನುವುದು ಅಮೆರಿಕದ ತಜ್ಞರ ಅನಿಸಿಕೆ.
ರಿಪಬ್ಲಿಕನ್ ಪಕ್ಷದ ಮುಂಚೂಣಿ ನಾಯಕರು ಮತ್ತು ಕನ್ಸರ್‌ವೇಟಿವ್‌ನ ಚಿಂತಕರು, 21ನೇ ಶತಮಾನವನ್ನು ರೂಪಿಸುವಲ್ಲಿ ಭಾರತ- ಅಮೆರಿಕದ ಭವಿಷ್ಯದ ಸಂಬಂಧವನ್ನು ಪ್ರಮುಖ ವಿಷಯವಾಗಿಯೇ ಪರಿಗಣಿಸುತ್ತಾರೆ ಎಂದು ಸಂವಹನ ತಂತ್ರಜ್ಞ ಅನಂಗ್ ಮಿತ್ತಲ್ ಅಭಿಪ್ರಾಯಪಟ್ಟಿದ್ದಾರೆ.
‘ಟ್ರಂಪ್ ಅವರು ಭಾರತ-ಅಮೆರಿಕ ನಡುವಿನ ಸಂಬಂಧವನ್ನು ಪ್ರಧಾನಿ ಮೋದಿ ಅವರೊಂದಿಗಿನ ವೈಯಕ್ತಿಕ ಸಂಬಂಧದ ಮೂಲಕವೇ ಗಟ್ಟಿಯಾಗಿಸಲು ಹಾಗೂ ವ್ಯಾಪಾರ, ರಕ್ಷಣೆ ಮತ್ತು ಬಂಡವಾಳ ಹೂಡಿಕೆಯ ಕುರಿತು ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳಲು ಬಯಸಬಹುದು’ ಎಂದು ಹೇಳಿದ್ದಾರೆ.
‘ಮುಂದಿನ ವರ್ಷ ಟ್ರಂಪ್ ಅವರು ಯುರೋಪ್ ಮತ್ತು ಏಷ್ಯಾಕ್ಕೆ ಭೇಟಿ ನೀಡಲಿದ್ದು ಬಹುಪಕ್ಷೀಯ ವೇದಿಕೆಗಳಲ್ಲಿ ಉಭಯ ನಾಯಕರು ಮುಖಾಮುಖಿಯಾಗಬಹುದು. ಟ್ರಂಪ್ ಭಾರತಕ್ಕೆ ಭೇಟಿ ನೀಡುತ್ತಾರೆ ಅಥವಾ 2025ರಲ್ಲಿ ಅಮೆರಿಕಕ್ಕೆ ಭೇಟಿ ನೀಡುವಂತೆ ಮೋದಿಯವರಿಗೆ ಅವರು ಆಹ್ವಾನ ನೀಡುವ ನಿರೀಕ್ಷೆಯೂ ಇದೆ ಎನ್ನುತ್ತಾರೆ ಮಿತ್ತಲ್.
ಟ್ರಂಪ್ ಅವರ ಐತಿಹಾಸಿಕ ವಿಜಯವನ್ನು ಅಭಿನಂದಿಸಿದ ವಿಶ್ವನಾಯಕರಲ್ಲಿ ಮೋದಿ ಕೂಡ ಪ್ರಮುಖರಾಗಿದ್ದಾರೆ. ‘ವಲಸೆ, ವ್ಯಾಪಾರಕ್ಕೆ ಸಂಬಂಧಿಸಿದ ವಿವಾದಗಳು ಅಥವಾ ಭಾರತ- ಕೆನಡಾ ರಾಜತಾಂತ್ರಿಕ ಸಂಘರ್ಷದ ಹೊರತಾಗಿಯೂ ಭಾರತ-ಅಮೆರಿಕ ಕಾರ್ಯತಂತ್ರದ ಪಾಲುದಾರಿಕೆಯು ಇನ್ನಷ್ಟು ಗಾಢವಾಗಿ ಮುಂದುವರಿಯಲಿದೆ’ ಎಂದು ಅವರು ಹೇಳಿದರು.
ಟ್ರಂಪ್ ಆಡಳಿತದೊಂದಿಗೆ ವ್ಯಾಪಾರ ಮತ್ತು ವಲಸೆಯ ಕುರಿತು ಭಾರತವು ಒಂದಿಷ್ಟು ಕಠಿಣವಾದ ಮಾತುಕತೆಗಳನ್ನು ನಡೆಸಬೇಕಾಗಬಹುದು ಎಂದು ಚುನಾವಣೆಗೆ ಒಂದು ದಿನ ಮುಂಚಿತವಾಗಿ, ಅಬ್ಸರ್ವರ್ ರಿಸರ್ಚ್ ಫೌಂಡೇಷನ್‌ನ ಅಮೆರಿಕ ಘಟಕದ ಕಾರ್ಯನಿರ್ವಾಹಕ ನಿರ್ದೇಶಕ ಧ್ರುವ ಜೈಶಂಕರ್ ಹೇಳಿದ್ದರು.
ಚೀನಾವನ್ನು ಗುರಿಯಾಗಿರಿಸಿಕೊಂಡು ಟ್ರಂಪ್ ಆಡಳಿತವು ಜಾರಿಗೊಳಿಸುವ ಆಕ್ರಮಣಕಾರಿ ವ್ಯಾಪಾರ ನೀತಿಯು ಭಾರತವನ್ನು ಬಾಧಿಸದೇ ಇರದುಅಶೋಕ್ ಮಲಿಕ್ ಏಷ್ಯಾ ಗ್ರೂಪ್ ಬಿಸಿನೆಸ್ ಕನ್ಸಲ್ಟೆನ್ಸಿ
ಮೋದಿ ಖಂಡಿತವಾಗಿಯೂ ಟ್ರಂಪ್ ಇಷ್ಟಪಡುವ ರೀತಿಯ ಪ್ರಬಲ ನಾಯಕ. ಉಭಯ ನಾಯಕರ ನಡುವಿನ ಆಪ್ತ ಸ್ನೇಹವು ಭಾರತಕ್ಕೆ ಪ್ರಯೋಜನವಾಗಲಿದೆಪ್ರೊ.ಹರ್ಷ್ ವಿ. ಪಂತ್ ಕಿಂಗ್ಸ್ ಕಾಲೇಜು ಲಂಡನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.