ವಿಶ್ವಸಂಸ್ಥೆ: ಇಸ್ರೇಲ್–ಹಮಾಸ್ ಸಂಘರ್ಷಕ್ಕೆ ಮಾನವೀಯ ನೆಲೆಯಲ್ಲಿ ತಕ್ಷಣವೇ ಕದನವಿರಾಮ ಘೋಷಣೆ ಹಾಗೂ ಒತ್ತೆಯಾಳುಗಳ ಬೇಷರತ್ ಬಿಡುಗಡೆಗೆ ಒತ್ತಾಯಿಸುವ ಸಲುವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡನೆಯಾದ ಕರಡು ನಿರ್ಣಯದ ಪರ ಭಾರತ ಮತ ಚಲಾಯಿಸಿದೆ.
193 ಸದಸ್ಯ ರಾಷ್ಟ್ರಗಳನ್ನೊಳಗೊಂಡ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಗಳವಾರ ನಡೆದ ತುರ್ತು ವಿಶೇಷ ಅಧಿವೇಶನದಲ್ಲಿ ಈಜಿಪ್ಟ್ ಕರಡು ನಿರ್ಣಯ ಮಂಡಿಸಿತು. ನಿರ್ಣಯದ ಪರ 153 ರಾಷ್ಟ್ರಗಳು ಮತ್ತು ವಿರುದ್ಧ 10 ರಾಷ್ಟ್ರಗಳು ಮತ ಚಲಾಯಿಸಿದವು. 23 ದೇಶಗಳು ಮತದಾನದಿಂದ ದೂರ ಉಳಿದವು.
ಅಲ್ಜೀರಿಯಾ, ಬಹರೇನ್, ಇರಾಕ್, ಕುವೈತ್, ಒಮನ್, ಕತಾರ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಪ್ಯಾಲೆಸ್ಟೀನ್ ಬೆಂಬಲದೊಂದಿಗೆ ಮಂಡನೆಯಾದ ಈ ನಿರ್ಣಯವು, 'ನಾಗರಿಕರ ರಕ್ಷಣೆಗಾಗಿ' ಗಾಜಾದಲ್ಲಿ ತಕ್ಷಣದ ಕದನ ವಿರಾಮವನ್ನು ಒತ್ತಾಯಿಸಿತು. ಹಾಗೆಯೇ, ಉಭಯ ಬಣಗಳು ಅಂತರರಾಷ್ಟ್ರೀಯ ಕಾನೂನು ಪಾಲಿಸಬೇಕು ಎಂಬ ಬೇಡಿಕೆಯನ್ನು ಪುನರುಚ್ಚರಿಸಿತು.
ಈ ನಿರ್ಣಯದಲ್ಲಿ ಹಮಾಸ್ ಹೆಸರು ಉಲ್ಲೇಖವಾಗಿರಲಿಲ್ಲ. ಅಮೆರಿಕವು, '2023ರ ಅಕ್ಟೋಬರ್ 7ರಂದು ಇಸ್ರೇಲ್‌ನಲ್ಲಿ ಹಮಾಸ್ ನಡೆಸಿದ ಭಯೋತ್ಪಾದಕ ದಾಳಿಯನ್ನು ಮತ್ತು ಅಮಾಯಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿರುವುದನ್ನು ವಿರೋಧಿಸಲಾಗುವುದು ಮತ್ತು ಖಂಡಿಸಲಾಗುವುದು' ಎಂಬುದನ್ನು ಮುಖ್ಯ ಪಠ್ಯದಲ್ಲಿ ಸೇರಿಸಿಕೊಳ್ಳುವಂತೆ ನಿರ್ಣಯಕ್ಕೆ ತಿದ್ದುಪಡಿ ಪ್ರಸ್ತಾಪಿಸಿತು. ಈ ತಿದ್ದುಪಡಿಯ ಪರವಾಗಿ ಭಾರತ ಮತ ಚಲಾಯಿಸಿತು.
ಗಾಜಾ ಪಟ್ಟಿಯಲ್ಲಿ ಕದನ ವಿರಾಮ ಘೋಷಿಸಬೇಕು ಎಂಬ ನಿರ್ಣಯಕ್ಕೆ ಭಾರತವು ಅಕ್ಟೋಬರ್‌ನಲ್ಲಿ ಬೆಂಬಲ ಸೂಚಿಸಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.