ADVERTISEMENT

ದಕ್ಷಿಣ ಆಫ್ರಿಕಾದಲ್ಲಿರುವ ಗಾಂಧೀಜಿ ಸ್ಮಾರಕ ನಿರ್ವಹಣೆಗೆ ನೆರವು: ಭಾರತದ ಭರವಸೆ

ಪಿಟಿಐ
Published 2 ಅಕ್ಟೋಬರ್ 2023, 12:38 IST
Last Updated 2 ಅಕ್ಟೋಬರ್ 2023, 12:38 IST
<div class="paragraphs"><p>ದಕ್ಷಿಣ ಆಫ್ರಿಕಾದ ಲೆನೇಸಿಯಾದಲ್ಲಿ ಸ್ಥಾಪಿಸಲಾಗಿರುವ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆ</p></div>

ದಕ್ಷಿಣ ಆಫ್ರಿಕಾದ ಲೆನೇಸಿಯಾದಲ್ಲಿ ಸ್ಥಾಪಿಸಲಾಗಿರುವ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆ

   

ಪಿಟಿಐ ಚಿತ್ರ

ಜೊಹಾನಸ್‌ಬರ್ಗ್: ‘ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮಾ ಗಾಂಧೀಜಿ ಅವರಿಗೆ ಸಂಬಂಧಿಸಿದ ಎಲ್ಲಾ ಸ್ಮಾರಕಗಳ ನಿರ್ವಹಣೆಗೆ ಅಲ್ಲಿನ ಸರ್ಕಾರಕ್ಕೆ ಅಗತ್ಯ ನೆರವು ನೀಡಲಾಗುವುದು‘ ಎಂದು ಭಾರತದ ಹೈಕಮಿಷನರ್‌ ಪ್ರಭಾತ್ ಕುಮಾರ್‌ ಹೇಳಿದರು.

ADVERTISEMENT

ಮಹಾತ್ಮಾ ಗಾಂಧೀಜಿ ಅವರ 154ನೇ ಜನ್ಮದಿನದ ಅಂಗವಾಗಿ ಸಾಂವಿಧಾನಿಕ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ರಾಷ್ಟ್ರಪಿತನಿಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

1908ರಿಂದ 1913ರವರೆಗೆ ಗಾಂಧೀಜಿ ಅವರು ನಾಲ್ಕು ಬಾರಿ ಸೆರೆವಾಸ ಅನುಭವಿಸಿದರು. ಅವರ ಮೊದಲ ಸೆರೆವಾಸ ದಕ್ಷಿಣ ಆಫ್ರಿಕಾದಲ್ಲೇ ಆಗಿತ್ತು.

2012ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಭೇಟಿ ನೀಡಿದ್ದ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಗಾಂಧೀಜಿ ಅವರ ಪ್ರತಿಮೆಯನ್ನು ಅಲ್ಲಿ ಅನಾವರಣಗೊಳಿಸಿದ್ದರು.

‘ನಾನು ಕರ್ತವ್ಯ ನಿರ್ವಹಿಸಿದ ಎಲ್ಲಾ ರಾಷ್ಟ್ರಗಳಲ್ಲೂ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದೇನೆ. ಇದೀಗ ದಕ್ಷಿಣ ಆಫ್ರಿಕಾದಲ್ಲೂ ಮಾಡುತ್ತಿದ್ದೇನೆ. 21 ವರ್ಷಗಳ ಕಾಲ ಗಾಂಧೀಜಿ ಅವರಿದ್ದ ದಕ್ಷಿಣ ಆಫ್ರಿಕಾ ಹೆಚ್ಚು ಮಹತ್ವದ್ದು’ ಎಂದರು.

ಕಾರ್ಯಕ್ರಮದ ನಂತರ ಕುಮಾರ್ ಅವರು ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿ, ಗಾಂಧಿ ಮತ್ತು ನೆಲ್ಸನ್ ಮಂಡೇಲಾ ಅವರ ಬದುಕಿಗೆ ಸಂಬಂಧಿಸಿದ ವಸ್ತುಗಳನ್ನು ವೀಕ್ಷಿಸಿದರು. ಮಂಡೇಲಾ ಅವರು 27 ವರ್ಷಗಳ ಕಾಲ ರಾಜಕೀಯ ಕೈದಿಯಾಗಿ ಸೆರೆವಾಸ ಅನುಭವಿಸಿದವರು. ಬಿಡುಗಡೆ ನಂತರ 1994ರಲ್ಲಿ ಅವರು ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.

ಜೊಹಾನಸ್‌ಬರ್ಗ್‌ನಿಂದ 30 ಕಿ.ಮೀ. ದೂರದಲ್ಲಿರುವ ಟಾಲ್‌ಸ್ಟಾಯ್ ಫಾರ್ಮ್‌ನಲ್ಲಿ ಗಾಂಧೀಜಿ ಅವರ 7 ಅಡಿ ಎತ್ತರದ ಪ್ರತಿಮೆ ಸ್ಥಾಪನೆಯಲ್ಲೂ ಭಾಗವಹಿಸುತ್ತೇನೆ. ಇಲ್ಲಿ ಎಂ.ಕೆ. ಗಾಂಧಿ ಅವರು ವಕೀಲರಾಗಿ ಕರ್ತವ್ಯ ನಿರ್ವಹಿಸಿದ್ದರು. ಗಾಂಧೀಜಿ ಅವರಿದ್ದ ಝಿಂಕ್ ಮತ್ತು ಮರದಿಂದ ಮಾಡಿದ ಮನೆ ಮಾತ್ರ ಇಲ್ಲಿ ಉಳಿದಿದೆ. ಅದರ ಸುತ್ತಲೂ ಎತ್ತರದ ಹುಲ್ಲು ಬೆಳೆದಿತ್ತು. ಆದರೆ ಗಾಂಧಿವಾದಿ ಮೋಹನ್ ಹಿರಾ ಹಾಗೂ ಮಹಾತ್ಮ ಗಾಂಧೀ ಸಂಸ್ಮರಣಾ ಸಂಸ್ಥೆ ಮಧ್ಯಪ್ರವೇಶಿಸಿದ ನಂತರ ಭಾರತ ಸರ್ಕಾರದ ನೆರವಿನೊಂದಿಗೆ ಈ ಟಾಲ್‌ಸ್ಟಾಯ್‌ ಫಾರ್ಮ್‌ ಅನ್ನು ಸಂರಕ್ಷಿಸಲಾಗಿದೆ. ಇಲ್ಲಿ ಈಗ ಹಣ್ಣಿನ ತೋಟ ತಲೆ ಎತ್ತಿದೆ. ಶಾಂತಿ ವನದಲ್ಲಿ ಹೂವುಗಳು ಅರಳಿವೆ. ಇಲ್ಲಿ ಒಂದು ಗ್ರಂಥಾಲಯವೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.