ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿ ಭಾರತಎರಡು ವರ್ಷಗಳ ಅವಧಿಗೆ ಆಯ್ಕೆಯಾಗಿದೆ. ಚಲಾವಣೆಗೊಂಡ 192 ಮತಗಳಲ್ಲಿಭಾರತವು 184 ಮತಗಳನ್ನು ಪಡೆಯಿತು.
ಭಾರತದೊಂದಿಗೆ, ಐರ್ಲೆಂಡ್, ಮೆಕ್ಸಿಕೊ ಮತ್ತು ನಾರ್ವೆ ಕೂಡ ಬುಧವಾರ ನಡೆದ ಭದ್ರತಾ ಮಂಡಳಿ ಚುನಾವಣೆಯಲ್ಲಿ ಆಯ್ಕೆಯಾಗಿವೆ.
ಏಷ್ಯಾ–ಪೆಸಿಫಿಕ್ ಭಾಗದಿಂದ ಭಾರತ ಮಾತ್ರ ಸ್ಪರ್ಧಿಸಿತ್ತು. ಹೀಗಾಗಿ ಈ ಭಾಗದಿಂದ ಚುನಾವಣಾ ಕಣದಲ್ಲಿದ್ದ ಏಕೈಕ ರಾಷ್ಟ್ರ ಭಾರತವಾಗಿತ್ತು. ಭಾರತದ ಉಮೇದುವಾರಿಕೆಯನ್ನು ಏಷ್ಯಾ–ಪೆಸಿಫಿಕ್ ಭಾಗದ 55 ಸದಸ್ಯ ದೇಶಗಳ ಗುಂಪು ಅವಿರೋಧವಾಗಿ ಅನುಮೋದಿಸಿದ್ದವು. ವಿಶೇಷವೆಂದರೆ, ಚೀನಾ, ಪಾಕಿಸ್ತಾನ ಕೂಡ ಭಾರತದ ಆಯ್ಕೆಗೆ ಬೆಂಬಲ ಸೂಚಿಸಿದ್ದವು.
ಪ್ರತಿ ವರ್ಷ ಎರಡು ವರ್ಷಗಳ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯ ದೇಶಗಳ ಆಯ್ಕೆಗೆ ಚುನಾವಣೆ ನಡೆಯುತ್ತದೆ. 10 ಸದಸ್ಯ ಸ್ಥಾನಗಳನ್ನು ವಿಭಾಗವಾರು ಹಂಚಿಕೆ ಮಾಡಲಾಗಿದೆ. ಮೂರನೇ ಎರಡರಷ್ಟು ಬಹುಮತ ಪಡೆಯುವ ದೇಶಗಳು ಚುನಾವಣೆಯಲ್ಲಿ ಆಯ್ಕೆಯಾಗಲಿವೆ.
ವಿಶ್ವಸಂಸ್ಥೆಯ ಸಂಸ್ಥಾಪಕ ಸದಸ್ಯ ದೇಶಗಳಲ್ಲಿ ಒಂದಾಗಿರುವ ಭಾರತವು ಭದ್ರತಾ ಮಂಡಳಿಯಲ್ಲಿ ಕಾಯಂ ಅಲ್ಲದ ಸದಸ್ಯ ದೇಶವಾಗಿ ಎರಡು ವರ್ಷಗಳ ಅವಧಿಗೆ ಆಯ್ಕೆಯಾಗುತ್ತಿರುವುದು ಮಹತ್ವದ ಬೆಳವಣಿಗೆ ಎಂದು ವಿಶ್ವಸಂಸ್ಥೆಯ ಭಾರತದ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಹೇಳಿದ್ದಾರೆ.
ಭಾರತ ಈ ಹಿಂದೆ ಹಲವು ಭಾರಿ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯ ದೇಶವಾಗಿ ಆಯ್ಕೆಯಾಗಿತ್ತು. 1950-1951, 1967-1968, 1972-1973, 1977-1978, 1984-1985, 1991-1992 ಮತ್ತು ಇತ್ತೀಚೆಗೆ 2011-2012ರಲ್ಲಿ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಭದ್ರತಾ ಮಂಡಳಿಗೆ ಪ್ರವೇಶಿಸಿತ್ತು.
75ನೇ ಅಧಿವೇಶನದ ಅಧ್ಯಕ್ಷ, ಭದ್ರತಾ ಮಂಡಳಿಯ ಐದು ಕಾಯಂ ಅಲ್ಲದ ಸದಸ್ಯ ದೇಶಗಳು ಹಾಗೂ ಆರ್ಥಿಕ–ಸಾಮಾಜಿಕ ಮಂಡಳಿಯ ಸದಸ್ಯ ಹುದ್ದೆಗೆ 193 ಸದಸ್ಯ ರಾಷ್ಟ್ರಗಳ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಬುಧವಾರ ಚುನಾವಣೆ ನಡೆಯಿತು. ಕೋವಿಡ್ ಕಾರಣದಿಂದ ಮತದಾನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.