ADVERTISEMENT

311 ಭಾರತೀಯರ ಗಡಿಪಾರು

ಪಿಟಿಐ
Published 30 ಅಕ್ಟೋಬರ್ 2019, 13:25 IST
Last Updated 30 ಅಕ್ಟೋಬರ್ 2019, 13:25 IST

ಮೆಕ್ಸಿಕೊ ಸಿಟಿ: ಕಾನೂನು ಬಾಹಿರವಾಗಿ ನೆಲೆಸಿದ್ದ 311 ಭಾರತೀಯರನ್ನು ಮೆಕ್ಸಿಕೊದ ವಲಸೆ ಅಧಿಕಾರಿಗಳು ಗಡಿಪಾರು ಮಾಡಿದ್ದಾರೆ.

ಈ ಕುರಿತ ಪ್ರಕಟಣೆಯನ್ನು ರಾಷ್ಟ್ರೀಯ ವಲಸೆ ಸಂಸ್ಥೆ (ಐಎನ್‌ಎಂ) ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ.

ಭಾರತೀಯರು ಕಾಯಂ ವಾಸ್ತವ್ಯ ಬಯಸಿ ಮೆಕ್ಸಿಕೊಗೆ ಬಂದಿರಲಿಲ್ಲ. ಇವರು ಗಡಿ ದಾಟಿ ಅಮೆರಿಕಕ್ಕೆ ತೆರಳಲು ಬಯಸಿದ್ದರು. ಈ ವಲಸಿಗರಲ್ಲಿ ಒಬ್ಬ ಮಹಿಳೆ ಕೂಡ ಇದ್ದರು. ಇದೇ ಮೊದಲ ಬಾರಿಗೆ ಮೆಕ್ಸಿಕೊ ಈ ಕ್ರಮ ಕೈಗೊಂಡಿದೆ. ಅಕ್ರಮ ವಲಸೆ ಕುರಿತು ಅಮೆರಿಕ ತಳೆದಿರುವ ಕಠಿಣ ನಿಲುವಿನ ಹಿನ್ನೆಲೆಯಲ್ಲಿ ವಲಸಿಗರನ್ನು ಭಾರತಕ್ಕೆ ವಾಪಸು ಕಳುಹಿಸಲಾಗಿದೆ.

ADVERTISEMENT

ಭಾರತೀಯರನ್ನು ಟೊಲುಕಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ‘ಬೋಯಿಂಗ್‌ 747’ ಮೂಲಕ ನವದೆಹಲಿಗೆ ಕಳುಹಿಸಲಾಗಿದೆ. ಇವರು ದೇಶದ ಓಕ್ಸಾಕ, ಬಾಜಾ ಕ್ಯಾಲಿಫೋರ್ನಿಯಾ, ವೆರಾಕ್ರಜ್, ಚಿಯಾಪಾಸ್, ಸೊನೊರಾ, ಮೆಕ್ಸಿಕೊ ಸಿಟಿ, ಡುರಾಂಗೊ ಮತ್ತು ತಬಾಸ್ಕೊ ನಗರಗಳಲ್ಲಿ ಅಕ್ರಮವಾಗಿ ನೆಲೆಸಿದ್ದರು.

ಗಡಿ ಮೂಲಕ ಅಮೆರಿಕಕ್ಕೆ ಪ್ರವೇಶಿಸುವ ಅಕ್ರಮ ವಲಸಿಗರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಮೆಕ್ಸಿಕೊ ಸರಕುಗಳ ಮೇಲೆ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೇ ಜೂನ್‌ನಲ್ಲಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ದೇಶದ ಗಡಿ ಭದ್ರತೆಯನ್ನು ಹೆಚ್ಚಿಸಿದ್ದಲ್ಲದೆ, ಅಕ್ರಮವಾಗಿ ನೆಲೆಸಿದ್ದ ವಲಸಿಗರಿಗೆ ಮೆಕ್ಸಿಕೊ ಹುಡುಕಾಟ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.