ADVERTISEMENT

ಮೋದಿ, ರೆಡ್ಡಿ, ಅದಾನಿ ವಿರುದ್ಧ ಭ್ರಷ್ಟಾಚಾರ, ಪೆಗಾಸಸ್‌ ಬೇಹುಗಾರಿಕೆ ಕೇಸು

ಪಿಟಿಐ
Published 2 ಸೆಪ್ಟೆಂಬರ್ 2022, 5:45 IST
Last Updated 2 ಸೆಪ್ಟೆಂಬರ್ 2022, 5:45 IST
ನರೇಂದ್ರ ಮೋದಿ, ಜಗನ್‌ ಮೋಹನ ರೆಡ್ಡಿ, ಗೌತಮ್‌ ಅದಾನಿ
ನರೇಂದ್ರ ಮೋದಿ, ಜಗನ್‌ ಮೋಹನ ರೆಡ್ಡಿ, ಗೌತಮ್‌ ಅದಾನಿ    

ವಾಷಿಂಗ್ಟನ್‌: ಭ್ರಷ್ಟಾಚಾರ ಮತ್ತು ಪೆಗಾಸಸ್ ಬೇಹುಗಾರಿಕೆ ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ, ಆಂಧ್ರಪ್ರದೇಶ ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಮತ್ತು ಉದ್ಯಮಿ ಗೌತಮ್ ಅದಾನಿ ವಿರುದ್ಧ ಭಾರತೀಯ-ಅಮೆರಿಕನ್ ವೈದ್ಯರೊಬ್ಬರು ಅಮೆರಿಕದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.

ಆಂಧ್ರ ಪ್ರದೇಶ ಮೂಲದ, ಸದ್ಯ ಅಮೆರಿಕದ ರಿಚ್‌ಮಂಡ್‌ ಎಂಬಲ್ಲಿ ನೆಲೆಸಿರುವ ಗ್ಯಾಸ್ಟ್ರೋಎಂಟರಾಲಜಿ ತಜ್ಞ, ಡಾ ಲೋಕೇಶ್ ವುಯ್ಯೂರ್ರು ಎಂಬುವವರು ಮೋದಿ, ರೆಡ್ಡಿ ಮತ್ತು ಅದಾನಿ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಕೊಲಂಬಿಯಾದ ಜಿಲ್ಲಾ ನ್ಯಾಯಾಲಯವು ಈ ಎಲ್ಲಾ ನಾಯಕರು ಮತ್ತು ಇನ್ನೂ ಹಲವರಿಗೆ ಸಮನ್ಸ್‌ ಜಾರಿ ಮಾಡಿದ್ದು, ಆಗಸ್ಟ್‌ನಲ್ಲಿ ಅದನ್ನು ಸಂಬಂಧಿಸಿದವರಿಗೆ ತಲುಪಿಸಲಾಗಿದೆ.

ADVERTISEMENT

ಆದರೆ, ಇದನ್ನು ‘ನಾಮಕಾವಸ್ತೆ ಕೇಸು’ ಎಂದು ನ್ಯೂಯಾರ್ಕ್‌ನ ಪ್ರಖ್ಯಾತ ಭಾರತೀಯ-ಅಮೆರಿಕನ್ ವಕೀಲ ರವಿ ಬಾತ್ರಾ ಕುಹಕವಾಡಿದ್ದಾರೆ.

ಲೋಕೇಶ್‌ ಅವರು ದಾಖಲಿಸಿರುವ ಪ್ರಕರಣದಲ್ಲಿ ವಿಶ್ವ ಆರ್ಥಿಕ ವೇದಿಕೆಯ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಪ್ರೊಫೆಸರ್ ಕ್ಲಾಸ್ ಶ್ವಾಬ್ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ.

‘ಮೋದಿ, ರೆಡ್ಡಿ ಮತ್ತು ಅದಾನಿ ಭಾರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅಮೆರಿಕಕ್ಕೆ ಭಾರಿ ಪ್ರಮಾಣದಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ. ರಾಜಕಾರಣಿಗಳ ವಿರುದ್ಧ ಬೇಹುಗಾರಿಕಾ ತಂತ್ರಾಂಶ ‘ಪೆಗಾಸಸ್‌’ ಬಳಸಿದ್ದಾರೆ’ ಎಂದು ಆರೋಪಿಸಿರುವ ವೈದ್ಯ ಲೋಕೇಶ್‌ ಮೊದಲಿಗೆ ಯಾವುದೇ ಸಾಕ್ಷ್ಯ– ದಾಖಲೆಗಳಿಲ್ಲದೇ ಪ್ರಕರಣ ದಾಖಲಿಸಿದ್ದರು.

ಮೊಕದ್ದಮೆಯನ್ನು ಮೇ 24 ರಂದು ದಾಖಲಿಸಲಾಗಿದೆ. ನಂತರ ನ್ಯಾಯಾಲಯವು ಜುಲೈ 22 ರಂದು ಸಮನ್ಸ್ ಜಾರಿ ಮಾಡಿದೆ. ಆಗಸ್ಟ್ 2 ರಂದು ಸ್ವಿಟ್ಜರ್ಲೆಂಡ್‌ನಲ್ಲಿರುವ ಶ್ವಾಬ್‌ಗೆ ಅವರಿಗೂ, ಭಾರತದ ನಾಯಕರಿಗೆ ಆಗಸ್ಟ್ 4 ರಂದು ಸಮನ್ಸ್‌ ತಲುಪಿಸಲಾಗಿದೆ.

ಡಾ.ಲೋಕೇಶ್‌ ಅವರು ಆಗಸ್ಟ್ 19 ರಂದು ನ್ಯಾಯಾಲಯಕ್ಕೆ ಸಾಕ್ಷ್ಯವನ್ನು ಸಲ್ಲಿಸಿದರು.

ಈ ಬಗ್ಗೆ ಮಾತನಾಡಿರುವ ವಕೀಲ ಬಾತ್ರಾ, ಲೋಕೇಶ್‌ ಅವರು ಬಹಳ ಬಿಡುವಾಗಿರಬೇಕು. ಅದಕ್ಕಾಗಿಯೇ ಈ ಪ್ರಕರಣ ದಾಖಲಿಸಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

‘ಅಮೆರಿಕದ ಮಿತ್ರರಾಷ್ಟ್ರವಾದ ಭಾರತದ ಮಾನಹಾನಿ ಮಾಡುವ ಉದ್ದೇಶದ 53 ಪುಟಗಳ ದೂರು ನಮ್ಮ ಒಕ್ಕೂಟ ನ್ಯಾಯಾಲಯಗಳ ದುರ್ಬಳಕೆಯಾಗಿದೆ. ಲೋಕೇಶ್ ಅವರು ತುಂಬಾ ಬಿಡುವಾಗಿರಬೇಕು ಎಂದು ತೋರುತ್ತಿದೆ. ಇದು ಪ್ರಾದೇಶಿಕತೆ ಮೀರಿದ ಮತ್ತು ವಿದೇಶಿ ಸಾರ್ವಭೌಮ ವಿನಾಯಿತಿ ಕಾಯ್ದೆ ವಿರುದ್ಧವಾದ ಕೇಸು. ಸಿಖ್‌ ಫಾರ್‌ ಜಸ್ಟೀಸ್‌ (ಎಸ್‌ಎಫ್‌ಜೆ) ಮತ್ತು ಕಾಂಗ್ರೆಸ್‌, ಎಸ್‌ಎಫ್‌ಜೆ ಮತ್ತು ಸೋನಿಯಾ ಗಾಂಧಿ ಪ್ರಕರಣಗಳನ್ನು ನ್ಯಾಯಾಲಯ ಪದೇ ಪದೇ ತಳ್ಳಿ ಹಾಕಿದ್ದನ್ನು ನಾವು ನೋಡಿದ್ದೇವೆ’ ಎಂದು ಅವರು ತಿಳಿಸಿದರು.

ಅಲ್ಲದೇ, ಲೋಕೇಶ್‌ ಅವರ ಅರ್ಜಿಯನ್ನು ‘ಟಾಯ್ಲೆಟ್‌ ಪೇಪರ್‌’ ಎಂದೂ ಬಾತ್ರಾ ಮೂದಲಿಸಿದ್ದಾರೆ.

‘ಯಾವುದೇ ವಕೀಲರು ಈ ಟಾಯ್ಲೆಟ್ ಪೇಪರ್‌ಗೆ ಸಹಿ ಹಾಕಲು ಒಪ್ಪಿಲ್ಲ. ಯಾಕೆಂದರೆ ಈ ಪ್ರಕರಣ ನ್ಯಾಯಾಲಯಕ್ಕೆ ಬರುವುದಕ್ಕೂ ಮೊದಲೇ ಸತ್ತುಹೋಗಿದೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.