ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಪರ ದಕ್ಷಿಣ ಏಷ್ಯಾ ಮೂಲದ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಅಮೆರಿಕದ ಉದ್ಯಮಿಯೊಬ್ಬರು ಬಾಲಿವುಡ್ ಹಾಡು ತಯಾರಿಸಿ ಪ್ರಚಾರ ಕಾರ್ಯಕ್ಕೆ ಬಳಸಿಕೊಂಡಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಹಣಕಾಸು ಸಮಿತಿಯ ಸದಸ್ಯ ಹಾಗೂ ಉದ್ಯಮಿ ಅಜಯ್ ಜೈನ್ ಭುಟೊರಿಯಾ ನೇತೃತ್ವದಲ್ಲಿ ‘ನಾಚೊ–ನಾಚೊ’ ಹಾಡು ರಚಿಸಿದ್ದು, ಬಾಲಿವುಡ್‌ನ ಗಾಯಕ ಶಿಬಾನಿ ಕಶ್ಯಪ್ ಹಾಡಿದ್ದಾರೆ. ರಿತೇಶ್ ಪಾರೀಖ್ ಅವರು ಇದರ ನಿರ್ಮಾಪಕರು.
‘ನಾಚೊ–ನಾಚೊ’ ಬರೀ ಹಾಡು ಮಾತ್ರವಲ್ಲ, ಇದೊಂದು ಚಳವಳಿಯಾಗಿದೆ. ಅತ್ಯಂತ ಪ್ರಮುಖ ರಾಜ್ಯಗಳಲ್ಲಿ ದಕ್ಷಿಣ ಏಷ್ಯಾದ ಮತದಾರರನ್ನು ತಲುಪಲು ಈ ಹಾಡು ನೆರವಾಗಲಿದೆ’ ಎಂದು ಅಜಯ್ ಜೈನ್ ತಿಳಿಸಿದರು.
‘2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತ ಮೂಲದ ಅಮೆರಿಕನ್ನರ ಪೈಕಿ 44 ಲಕ್ಷ ಮಂದಿ ಹಾಗೂ ದಕ್ಷಿಣ ಏಷ್ಯಾದ 60 ಲಕ್ಷ ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಕಮಲಾ ಹ್ಯಾರಿಸ್ ಗೆಲ್ಲಲು ಅವರ ಮತಗಳು ನಿರ್ಣಾಯಕವಾಗಿವೆ. ಅವರನ್ನು ತಲುಪಲು ಹಿಂದಿ, ಪಂಜಾಬಿ, ತಮಿಳು, ತೆಲುಗು, ಗುಜರಾತಿ, ಬೆಂಗಾಲಿ ಸೇರಿದಂತೆ ಇತರೆ ಭಾಷೆಗಳಲ್ಲಿ ಹಾಡನ್ನು ಸಂಯೋಜಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.