ವಾಷಿಂಗ್ಟನ್: ಭಾರತೀಯ ಸಂಜಾತೆ ನೀರಾ ತಂಡನ್ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಹಿರಿಯ ಸಲಹೆಗಾರರಾಗಿ ನೇಮಕವಾಗಿದ್ದು, ಸೋಮವಾರ ಶ್ವೇತಭವನ ಪ್ರವೇಶಿಸಲಿದ್ದಾರೆ.
ನೀರಾ ತಂಡನ್ ಅವರು ರಿಪಬ್ಲಿಕನ್ ಸೆನೆಟರ್‌ಗಳ ತೀವ್ರ ವಿರೋಧದಿಂದಾಗಿ ಎರಡು ತಿಂಗಳ ಹಿಂದೆಯಷ್ಟೇ ಶ್ವೇತ ಭವನದ ಬಜೆಟ್ ನಿರ್ವಹಣಾ ಕಚೇರಿಯ ನಿರ್ದೇಶಕಿ ಸ್ಥಾನದ ನಾಮ ನಿರ್ದೇಶವನ್ನು ಹಿಂಪಡೆದಿದ್ದರು.
ತಂಡನ್ ಅವರಿಗೆ ಎರಡು ಹೊಣೆಗಾರಿಕೆ ನೀಡಲಾಗಿದೆ. ಮೊದಲನೆಯದು ಅಮೆರಿಕದ ಡಿಜಿಟಲ್ ಸೇವೆಯ ಪರಿಶೀಲನೆ ನಡೆಸುವುದು. ಎರಡನೆಯದು ‘ಅಫೋರ್ಡಬಲ್ ಕೇರ್ ಆ್ಯಕ್ಟ್’ ಅನ್ನು ರದ್ದುಪಡಿಸಬೇಕೆಂದು ಕೋರಿ ರಿಪಬ್ಲಿಕನ್ ಪಕ್ಷದವರಿಂದ ಸಲ್ಲಿಕೆಯಾಗುವ ದಾವೆಗಳ ಕುರಿತಂತೆ ಸುಪ್ರೀಂ ಕೋರ್ಟ್ ನೀಡುವ ತೀರ್ಪಿಗೆ ತಕ್ಕಂತೆ ಯೋಜನೆ ರೂಪಿಸುವುದಾಗಿದೆ.
ಭಾರತೀಯ ಅಮೆರಿನ್ ನೀತಿ ತಜ್ಞೆ ಆಗಿರುವ ತಂಡನ್ ಅವರು ಪ್ರಸ್ತುತ ಪ್ರಗತಿಪರ ಚಿಂತಕರ ಚಾವಡಿಯಾದ ಸೆಂಟರ್ ಫಾರ್ ಅಮೆರಿಕನ್ ಪ್ರೋಗ್ರೆಸ್‌ನ (ಸಿಎಪಿ) ಅಧ್ಯಕ್ಷೆ ಮತ್ತು ಸಿಇಒ ಕೂಡ ಆಗಿದ್ದಾರೆ.
ತಂಡನ್ ಅವರು ಈ ಹಿಂದೆ ಅಮೆರಿಕ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆಯಲ್ಲಿ ಆರೋಗ್ಯ ಸುಧಾರಣೆಗಳ ಹಿರಿಯ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಒಬಾಮಾ- ಬೈಡೆನ್ ಅಧ್ಯಕ್ಷೀಯ ಪ್ರಚಾರಕ್ಕೆ ಸಂಬಂಧಿಸಿದ ಆಂತರಿಕ ನೀತಿಯ ನಿರ್ದೇಶಕರಾಗಿದ್ದರು.
ಹಿಲರಿ ಕ್ಲಿಂಟನ್ ಅವರ ಮೊದಲ ಅಧ್ಯಕ್ಷೀಯ ಪ್ರಚಾರಕ್ಕಾಗಿ ನೀತಿ ನಿರ್ದೇಶಕರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಹೀಗೆ ಹಲವು ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ತಂಡನ್ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವಿ ಮತ್ತು ‘ಯೇಲ್’ ಲಾ ಸ್ಕೂಲ್‌ನಲ್ಲಿ ಕಾನೂನು ಪದವಿ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.