ADVERTISEMENT

ಟೆಕ್ಸಾಸ್‌: ಗುಂಡಿನ ದಾಳಿಗೆ ಸಿಖ್‌ ಪೊಲೀಸ್‌ ಅಧಿಕಾರಿ ಬಲಿ

ಪಿಟಿಐ
Published 28 ಸೆಪ್ಟೆಂಬರ್ 2019, 17:48 IST
Last Updated 28 ಸೆಪ್ಟೆಂಬರ್ 2019, 17:48 IST
ಸಂದೀಪ್‌ ಸಿಂಗ್‌
ಸಂದೀಪ್‌ ಸಿಂಗ್‌   

ಹ್ಯೂಸ್ಟನ್‌: ಅಮೆರಿಕದ ಟೆಕ್ಸಾಸ್‌ನಲ್ಲಿ ಭಾರತ ಸಂಜಾತ ಸಿಖ್‌ ಪೊಲೀಸ್‌ ಅಧಿಕಾರಿಯೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದುಷ್ಕರ್ಮಿಯ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

ಸಂದೀಪ್‌ ಸಿಂಗ್‌ ಧಾಲಿವಾಲ್‌ (42) ಮೃತ ಪೊಲೀಸ್‌ ಅಧಿಕಾರಿ.

’ಪುರುಷ ಹಾಗೂ ಮಹಿಳೆ ಸಂಚರಿಸುತ್ತಿದ್ದ ವಾಹನವನ್ನು ಸಂದೀಪ್‌ ಸಿಂಗ್‌ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಇವರಲ್ಲೊಬ್ಬರು ಕೆಳಗಿಳಿದು ಸಂದೀಪ್‌ ಮೇಲೆ ಎರಡು ಬಾರಿ ಗುಂಡಿನ ದಾಳಿ ನಡೆಸಿದ್ದಾರೆ‘ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ತೀವ್ರವಾಗಿ ಗಾಯಗೊಂಡಿದ್ದ ಸಂದೀಪ್‌ ಅವರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು‘ ಎಂದಿದ್ದಾರೆ.

’ಈ ಸಂಬಂಧ ರಾಬರ್ಟ್‌ ಸೊಲಿಸ್‌ ಎಂಬಾತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ‘ ಎಂದು ಪೊಲೀಸ್‌ ಇಲಾಖೆ ಟ್ವೀಟ್‌ ಮಾಡಿದೆ.

’ಸಂದೀಪ್‌ ಅವರು ಹೃದಯವಂತ ಪೊಲೀಸ್‌ ಅಧಿಕಾರಿಯಾಗಿದ್ದರು. ಗೌರವ ಮತ್ತು ಹೆಮ್ಮೆಯಿಂದ ಅವರು ತಮ್ಮ ಸಮುದಾಯವನ್ನು ಪ್ರತಿನಿಧಿಸಿದ್ದರು‘ ಎಂದು ಹ್ಯಾರಿಸ್‌ ಜಿಲ್ಲೆಯ ಪೊಲೀಸ್‌ ಆಯುಕ್ತರಾದ ಆಡ್ರಿಯನ್‌ ಗ್ರೇಶಿಯಾ ಹೇಳಿದ್ದಾರೆ.

ಸಿಖ್ ಸಮುದಾಯದವರಿಗೆ ಪೇಟ ಧರಿಸಿ, ಗಡ್ಡ ಬಿಟ್ಟು ಕೆಲಸ ನಿರ್ವಹಿಸುವ ನೀತಿಯನ್ನು ಆಡ್ರಿಯನ್‌ ಅವರು ಜಾರಿಗೆ ತಂದಿದ್ದರು.

ಸಂದೀಪ್‌, ಇಲ್ಲಿನ ಪೊಲೀಸ್‌ ಇಲಾಖೆಯಲ್ಲಿ ಪೇಟ ಧರಿಸಿ ಕೆಲಸ ನಿರ್ವಹಿಸಿದ್ದ ಮೊದಲ ವ್ಯಕ್ತಿಯಾಗಿದ್ದರು.

ಹ್ಯಾರಿಸ್‌ ಜಿಲ್ಲೆಯ ಪೊಲೀಸ್‌ ಠಾಣೆಯಲ್ಲಿ ಸಂದೀಪ್‌ ಹತ್ತು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು.

ಹುಟ್ಟೂರಿನಲ್ಲಿ ಮಡುಗಟ್ಟಿದ ಶೋಕ
ಸಂದೀಪ್‌ ಸಿಂಗ್‌ ಅವರು ಗುಂಡಿನ ದಾಳಿಗೆ ಬಲಿಯಾಗಿರುವ ವಿಷಯ ತಿಳಿದು ಅವರ ಹುಟ್ಟೂರಾದ ಪಂಜಾಬ್‌ನ ಕಪುರ್ತಲಾದ ಧಾಲಿವಾಲ್‌ ಬೆಟ್‌ ಗ್ರಾಮದಲ್ಲಿರುವ ಬಂಧುಗಳಲ್ಲಿ ದುಃಖ ಮಡುಗಟ್ಟಿದೆ.

’ಸಂದೀಪ್‌ ಮೃತಪಟ್ಟಿರುವ ಮಾಹಿತಿ ಶನಿವಾರ ಬೆಳಗಿನ ಜಾವ ಲಭಿಸಿತ್ತು. ಅನಂತರ ಅಮೆರಿಕದಲ್ಲಿರುವ ಕುಟುಂಬ ಸದಸ್ಯರಿಗೆ ಕರೆ ಮಾಡಿ ವಿಚಾರಿಸಿದೆವು‘ ಎಂದು ಅವರ ಮಾವ ಕರ್ತಾರ್‌ ಸಿಂಗ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.