ADVERTISEMENT

ಬೈಡನ್–ಕಮಲಾ ಪರ ಭಾರತೀಯ ಅಮೆರಿಕನ್ನರ ರ‍್ಯಾಲಿ

ಅಧ್ಯಕ್ಷೀಯ ಚುನಾವಣೆ; ’ಹೊರ ಬನ್ನಿ, ಮತಚಲಾಯಿಸಿ’

ಪಿಟಿಐ
Published 19 ಅಕ್ಟೋಬರ್ 2020, 6:01 IST
Last Updated 19 ಅಕ್ಟೋಬರ್ 2020, 6:01 IST
ಜೊ ಬೈಡನ್‌  ಬೆಂಬಲಿಗರು ಪ್ರಚಾರ ಮೆರವಣಿಗೆ ನಡೆಸುತ್ತಿರುವುದು  (ಎಎಫ್‌ಪಿ)
ಜೊ ಬೈಡನ್‌ ಬೆಂಬಲಿಗರು ಪ್ರಚಾರ ಮೆರವಣಿಗೆ ನಡೆಸುತ್ತಿರುವುದು (ಎಎಫ್‌ಪಿ)   

ನ್ಯೂಯಾರ್ಕ್‌: ಅಮೆರಿಕದಲ್ಲಿರುವ ಭಾರತೀಯರು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳಾದ ಜೊ ಬೈಡನ್ ಮತ್ತು ಕಮಲಾ ಹ್ಯಾರಿಸ್ ಪರ ಕ್ಯಾಲಿಫೋರ್ನಿಯಾದಲ್ಲಿ ’ಹೊರಗೆ ಬನ್ನಿ, ಮತ ಚಲಾಯಿಸಿ (ಗೆಟ್‌ ಔಟ್‌ ದಿ ವೋಟ್‌– ಜಿಒಟಿವಿ)’ ಹೆಸರಿನಲ್ಲಿ ಚುನಾವಣಾ ರ್‍ಯಾಲಿ ನಡೆಸಿದ್ದಾರೆ.

ಉದ್ಯಮಿ ದಂಪತಿ ಅಜಯ್ ಮತ್ತು ವಿನಿತಾ ಭುಟೊರಿಯಾ ಅವರು ’ಜಿಒಟಿವಿ’ ಆಯೋಜಿಸಿದ್ದ ಈ ರ‍್ಯಾಲಿಯಲ್ಲಿ ಮಾತನಾಡಿದ ಖ್ಯಾತ ಹೋಟೆಲ್ ಉದ್ಯಮಿ ಅಶೋಕ್ ಭಟ್‌, ’ಮುಂದಿನ ತಲೆಮಾರಿನ ಭಾರತೀಯ ಮೂಲದ ಅಮೆರಿಕ ನಿವಾಸಿಗಳ ಭವಿಷ್ಯಕ್ಕಾಗಿ, ಅಮೆರಿಕದಲ್ಲಿರುವ ನಮ್ಮ ಕನಸುಗಳನ್ನು ನನಸು ಮಾಡಿಕೊಳ್ಳುವುದಕ್ಕಾಗಿ ಈ ಬಾರಿ ಬೈಡನ್ ಮತ್ತು ಕಮಲಾ ಅವರ ಜೋಡಿಗೆ ಮತ ಚಲಾಯಿಸುವುದು ಬಹಳ ಮುಖ್ಯ’ ಎಂದು ಹೇಳಿದ್ದಾರೆ.

’ಕಮಲಾ ಅವರನ್ನು ಗೆಲ್ಲಿಸುವ ಮೂಲಕ ಅಮೆರಿಕದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದಂತಾಗುತ್ತದೆ’ ಎಂದು ಅಶೋಕ್ ಭಟ್ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಈ ರ್‍ಯಾಲಿಯಲ್ಲಿ ವ್ಯಾಪಾರಸ್ಥರು, ಶಿಕ್ಷಕರು, ವೈದ್ಯರು, ಉದ್ಯಮಿಗಳು, ಚುನಾಯಿತ ಅಧಿಕಾರಿಗಳು, ಸಮುದಾಯದ ಮುಖಂಡರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಅಮೆರಿಕದ ವಿಸ್ಕಾನ್ಸಿನ್, ಪೆನ್ಸಿಲ್ವೇನಿಯಾ, ಮಿಚಿಗನ್, ಫ್ಲೋರಿಡಾ ಮತ್ತು ನೆವಾಡಾ ರಾಜ್ಯಗಳಲ್ಲಿ 13 ಲಕ್ಷ ಭಾರತೀಯ ಮೂಲದ ಅಮೆರಿಕನ್ನರು ಇದ್ದಾರೆ. ’ಇದು ನಮ್ಮ ಜೀವಿತಾವಧಿಯ ಪ್ರಮುಖ ಚುನಾವಣೆ ಎಂದು ನಾನು ಭಾವಿಸುವುದಿಲ್ಲ. ಪ್ರಸ್ತುತ ಈ ದೇಶದಲ್ಲಿ ಸಾರ್ವಜನಿಕ ಆರೋಗ್ಯ, ಆರ್ಥಿಕ, ಜನಾಂಗೀಯ ತಾರತಮ್ಯ ಮತ್ತು ಹವಾಮಾನ ಬದಲಾವಣೆಯಂತಹ ನಾಲ್ಕು ಪ್ರಮುಖ ಬಿಕ್ಕಟ್ಟುಗಳನ್ನು ನಾವು ಎದುರಿಸುತ್ತಿದ್ದೇವೆ’ ಎಂದು ಭುಟೋರಿಯಾ ಹೇಳಿದರು. ’ಈ ಚುನಾವಣೆಯಲ್ಲಿ ವಿಶೇಷವಾಗಿ ಭಾರತೀಯ ಅಮೆರಿಕನ್ನರು ಜೊ ಬೈಡೆನ್ – ಕಮಲಾ ಜೋಡಿ ಪರ ಮತ ಚಲಾಯಿಸಬೇಕಾಗಿ ಮನವಿ ಮಾಡುತ್ತೇನೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.