ವಾಷಿಂಗ್ಟನ್: ಅಮೆರಿಕ ಆಡಳಿತದಲ್ಲಿ ಭಾರತ ಮೂಲದ ಅಮೆರಿಕನ್ನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಮುಖ ಹುದ್ದೆಗಳನ್ನು ವಹಿಸುತ್ತಿರುವುದನ್ನುವಿಶೇಷವಾಗಿ ಉಲ್ಲೇಖ ಮಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಭಾರತ ಮೂಲದ ಅಮೆರಿಕನ್ನರು ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಅಮೆರಿಕದ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ 50 ದಿನಗಳೊಳಗೆ ತಮ್ಮ ಆಡಳಿತದ ಪ್ರಮುಖ ಸ್ಥಾನಗಳಿಗೆ ಕನಿಷ್ಠ 55 ಭಾರತ ಮೂಲದ ಅಮೆರಿಕರನ್ನು ಬೈಡನ್ ನೇಮಕ ಮಾಡಿದ್ದಾರೆ. ಇವರಲ್ಲಿ ಅರ್ಧದಷ್ಟು ಮಹಿಳೆಯರಾಗಿದ್ದು, ಗಣನೀಯ ಸಂಖ್ಯೆಯಲ್ಲಿ ಶ್ವೇತಭವನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಐತಿಹಾಸಿಕ ಪರ್ಸಿವಿಯರೆನ್ಸ್ ರೋವರ್ ನೌಕೆಯು ಯಶಸ್ವಿಯಾಗಿ ಮಂಗಳ ಗ್ರಹದಲ್ಲಿ ಇಳಿದಿದೆ. ಭಾರತೀಯ ಮೂಲದ ಸ್ವಾತಿ ಮೋಹನ್ ಈ ಮಹತ್ವಾಕಾಂಕ್ಷೆಯ ಯೋಜನೆಯ ಕಾರ್ಯಾಚರಣೆಯ ನಿರ್ದೇಶನ, ಪಥನಿರ್ದೇಶನ ಮತ್ತು ನಿಯಂತ್ರಣ ಕಾರ್ಯಾಚರಣೆಯ ತಂಡದ ಮುಖ್ಯಸ್ಥರಾಗಿದ್ದಾರೆ.
ನಾಸಾ ವಿಜ್ಞಾನಿಗಳೊಂದಿಗೆ ನಡೆದ ವರ್ಚ್ಯುವಲ್ ಸಂವಾದದಲ್ಲಿ ಈ ಬಗ್ಗೆ ಪ್ರಸ್ತಾಪಿಸಿರುವ ಬೈಡನ್, ಭಾರತ ಮೂಲದ ಅಮೆರಿಕನ್ನರು ದೇಶವನ್ನು ಮುನ್ನಡೆಸುತ್ತಿದ್ದಾರೆ. ನೀವು (ಸ್ವಾತಿ ಮೋಹನ್), ನಮ್ಮ ಉಪಾಧ್ಯಕ್ಷೆ (ಕಮಲಾ ಹ್ಯಾರಿಸ್), ನನ್ನ ಭಾಷಣ ಬರಹಗಾರ (ವಿನಯ್ ರೆಡ್ಡಿ) ಎಂದು ಉಲ್ಲೇಖಿಸಿದರು.
ಇಲ್ಲಿಯ ವರೆಗೆ ಒಬಾಮಾ-ಬೈಡನ್ ಆಡಳಿತವು (2009-2017) ಅತಿ ಹೆಚ್ಚಿನ ಸಂಖ್ಯೆಯ ಭಾರತ ಮೂಲದ ಅಮೆರಿಕರನ್ನು ನೇಮಕ ಮಾಡಿದ ಹೆಗ್ಗಳಿಕೆಯನ್ನು ಹೊಂದಿದೆ. ಈ ಹಿಂದಿನ ಡೊನಾಲ್ಡ್ ಟ್ರಂಪ್ ಆಡಳಿತವು ಇದರಿಂದ ಹೊರತಾಗಿರಲಿಲ್ಲ. ಮೊದಲ ಬಾರಿಗೆ ಅಮೆರಿಕದ ರಾಷ್ಟ್ರೀಯ ಭದ್ರತಾ ಕೌನ್ಸಿಲ್‌ನಲ್ಲಿ ಕ್ಯಾಬಿನೆಟ್ ಶ್ರೇಣಿಯೊಂದಿಗೆ ಭಾರತ ಮೂಲದ ಅಮೆರಿಕನ್ನರನ್ನು ನೇಮಕಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.